ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲ ವರ್ಷಗಳಿಂದ ಗೊಂದಲದ ಗೂಡಾಗಿದ್ದ ಕೋವಿ ಪರವಾನಗಿ ನವೀಕರಣ ಪ್ರಕ್ರಿಯೆಯನ್ನು ಸರಾಗಗೊಳಿಸಲು ಜೂನ್.1ರಿಂದ ಆನ್ಲೈನ್ ಟ್ರ್ಯಾಕಿಂಗ್ ಸಿಸ್ಟಂ ಜಾರಿ ಮಾಡಲು ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ. ಈ ಪೋರ್ಟಲ್ ನ ಲಾಗಿನ್ ವ್ಯವಸ್ಥೆ ಕೇವಲ ಡಿಸಿ, ಎಸ್ಪಿ, ಡಿಎಫ್ಒ ಬಳಿ ಇರಲಿದ್ದು, ಈ ಹಿಂದೆ ಕಾಗದದ ಮೂಲಕ ನಡೆಸುತ್ತಿದ್ದ ಅರ್ಜಿಯಿಂದಾಗಿ ವಿಳಂಬವಾಗಿದ್ದ ಎಲ್ಲಾ ಅರ್ಜಿಗಳನ್ನು ಸ್ವೀಕರಿಸಿ, ಅವುಗಳ ಪರಿಶೀಲನೆ ನಡೆಸಿ ಮುಂದಿನ 60 ದಿನದೊಳಗೆ ಕ್ಲಿಯರ್ ಮಾಡಲು ಸಿದ್ದತೆ ನಡೆಸಲಾಗುತ್ತಿದ್ದು, ಕೃಷಿ ರಕ್ಷಣೆಗಾಗಿ ಕೋವಿ ಹೊಂದಿರುವ ರೈತರಿಗೆ ಅನುಕೂಲವಾಗಲಿದೆ.
ಕಾಗದ ರೂಪದ ಅರ್ಜಿಗಳಿಂದ ಪರವಾನಗಿ ವಿಳಂಬ
ಜಿಲ್ಲೆಯಲ್ಲಿ ಮ್ಯಾನುವಲ್ ಅರ್ಜಿ ಕೊಡುವ ವ್ಯವಸ್ಥೆ ಇದ್ದುದರಿಂದ ಕಂದಾಯ ಇಲಾಖೆಯಲ್ಲಿ ತಹಸೀಲ್ದಾರ್ ಹಂತದಲ್ಲಿ ಗ್ರಾಮಾಂತರ ಪ್ರದೇಶದ 200ಕ್ಕಿಂತ ಹೆಚ್ಚು ಅರ್ಜಿಗಳು ಬಾಕಿ ಇದ್ದವು. 2-3 ವರ್ಷಗಳಿಂದ ಅರ್ಜಿಗಳು ಮುಂದೆ ಹೋಗುತ್ತಿರಲಿಲ್ಲ. ಅದರ ನಿಖರ ಕಾರಣ ಯಾರಿಗೂ ಗೊತ್ತಿರಲಿಲ್ಲ. ಯಾವ ಹಂತದಲ್ಲಿ ಬಾಕಿ ಇವೆ ಎಂಬ ಮಾಹಿತಿಯೂ ಇರಲಿಲ್ಲ.
“ಗನ್ ಲೈಸೆನ್ಸ್ ನವೀಕರಣಕ್ಕೆ ಸಮಸ್ಯೆಯಾಗಬಾರದು ಎಂಬ ದೃಷ್ಟಿಯಿಂದ ಆನ್ಲೈನ್ ವ್ಯವಸ್ಥೆ ಮಾಡಿದ್ದು, ಜೂ.1ರಿಂದ ಅನುಷ್ಠಾನಕ್ಕೆ ಬರಲಿದೆ. ಹಳೆಯ ಗನ್ ಲೈಸೆನ್ಸ್ ನವೀಕರಣಕ್ಕೆ 30 ದಿನ ಮತ್ತು ಹೊಸ ಲೈಸೆನ್ಸ್ ಪಡೆಯಲು 60 ದಿನ ನಿಗದಿಪಡಿಸಲಾಗಿದೆ.”
-ದರ್ಶನ್ ಎಚ್.ವಿ., ಜಿಲ್ಲಾಧಿಕಾರಿ ದ.ಕ.





