ನಾರಾವಿ: ಬ್ರಹ್ಮಶ್ರೀ ನಾರಾಯಣಗುರು ಸಮಾಜಸೇವಾ ಸಂಘ (ರಿ.) ಯುವ ಬಿಲ್ಲವ ವೇದಿಕೆ ಹಾಗೂ ಮಹಿಳಾ ಬಿಲ್ಲವ ವೇದಿಕೆ ನಾರಾವಿ ಇದರ ಮುಂದಾಳತ್ವದಲ್ಲಿ ಸುಮಾರು 8.50 ಲಕ್ಷ ವೆಚ್ಚದಲ್ಲಿ ನಾರಾಯಣ ಗುರುಮಂದಿರ ನಿರ್ಮಾಣ ಕಾರ್ಯವು ನಾರಾವಿಯಲ್ಲಿ ಭರದಿಂದ ನಡೆಯುತ್ತಿದೆ.
1988ರಲ್ಲಿ ನಾರಾವಿಯ ಹಿರಿಯ ಬಿಲ್ಲವ ಮುಖಂಡರ ನೇತೃತ್ವದಲ್ಲಿ ಹಾಗೂ ಊರಿನ ಬಿಲ್ಲವ ಸಮಾಜದ ಸಹಕಾರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘವನ್ನು ನಾರಾವಿಯಲ್ಲಿ ಸ್ಥಾಪಿಸಲಾಗಿದೆ. ಬಳಿಕದ ದಿನಗಳಲ್ಲಿ ಹಲವಾರು ಮಂದಿ ಸಂಘವನ್ನು ಮುನ್ನಡೆಸಿ ಯಶಸ್ವಿಯ ಹಾದಿಯಲ್ಲಿ ಕೊಂಡೊಯ್ದಿದ್ದಾರೆ. ಇದೀಗ ಸಂಘದ ಗೌರವಾಧ್ಯಕ್ಷರಾದ ರವೀಂದ್ರ ಪೂಜಾರಿಯವರ ಸಾರಥ್ಯದಲ್ಲಿ ಸಂಘಕ್ಕೆ ನಿವೇಶನವನ್ನು ಗೊತ್ತುಪಡಿಸಿ ಸಂಘದ ಶ್ರೇಯೋಭಿವೃದ್ಧಿ ಚಟುವಟಿಕೆಗಳು ನಿರಂತರವಾಗಿ ನಡೆದುಕೊಂಡು ಬಂದಿದೆ. ಈ ಎಲ್ಲದರ ಮಧ್ಯೆ ನಾರಾಯಣ ಗುರು ಮಂದಿರದ ಅಗತ್ಯತೆಯನ್ನು ಮನಗಂಡು ಊರಿನ ಹಾಗೂ ಪರವೂರಿನ ಮಹನಿಯವರ ಸಹಕಾರದಲ್ಲಿ ಗುರು ಮಂದಿರದ ನಿರ್ಮಾಣ ಮಾಡಲಾಗುತ್ತಿದ್ದು, ಕೆಲಸಕಾರ್ಯಗಳು ತ್ವರಿತಗತಿಯಲ್ಲಿ ನಡೆಯುತ್ತಿದೆ.
ಶ್ರಮದಾನ
ಇದೀಗ ಸಂಘ ಹಾಗೂ ವೇದಿಕೆ ಸದಸ್ಯರ ಶ್ರಮದಾನದ ಮೂಲಕವೇ ಪ್ರತಿದಿನ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಸಮುದಾಯದ ಬಂಧುಗಳ ಸಹ ಕೈಜೋಡಿಸುತ್ತಿದ್ದಾರೆ. ಶ್ರಮದಾನದ ಭಾಗವಹಿಸಿದವರಿಗೆ ಉಪಹಾರದ ವ್ಯವಸ್ಥೆಯನ್ನೂ ಸದಸ್ಯರೇ ಆಸಕ್ತಿಯಿಂದ ಜವಾಬ್ದಾರಿ ವಹಿಸಿಕೊಂಡು ಮಾಡುತ್ತಿದ್ದು, ಗುರುಮಂದಿರ ನಿರ್ಮಾಣದಲ್ಲಿ ಸ್ವತಃ ನಾರಾಯಣಗುರುಗಳ ತತ್ವಾದರ್ಶ ಪಾಲನೆಯಾಗುತ್ತಿರುವುದು ಶ್ಲಾಘಿಸುವ ಅಂಶವಾಗಿದೆ.





