ವೇಣೂರು: ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಎರಡನೇ ಮಹಿಳಾ ಕಬಡ್ಡಿ ವಿಶ್ವಕಪ್ನಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿರುವ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ನ ಆಟಗಾರ್ತಿ, ಸುರತ್ಕಲ್ ಮೂಲದ ಧನಲಕ್ಷ್ಮೀ ಪೂಜಾರಿ ಅವರನ್ನು ಇಂದು ಸಂಜೆ ವೇಣೂರಿನಲ್ಲಿ ಗ್ರಾ.ಪಂ. ವತಿಯಿಂದ ಸ್ವಾಗತಿಸಿ, ಸನ್ಮಾನಿಸಲಾಯಿತು.
ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಕಾಶಿನಾಥ್ ಹೆಗ್ಡೆ, ಉಪಾಧ್ಯಕ್ಷ ಉಮೇಶ್ ನಡ್ತಿಕಲ್ಲು, ಪಂಚಾಯತು ಸದಸ್ಯರು, ಗ್ರಾಮಸ್ಥರು ಇದ್ದರು.
ನ. 15ರಂದು ಪ್ರಾರಂಭಗೊಂಡ ಪಂದ್ಯಾವಳಿ 25ರವರೆಗೆ ನಡೆದಿತ್ತು. ದಕ್ಷಿಣ ಭಾರತದಿಂದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಏಕೈಕ ಆಟಗಾರ್ತಿಯಾಗಿದ್ದರು. ಇವರು ಸುರತ್ಕಲ್ ಇಡ್ಯಾ ನಾರಾಯಣ ಪೂಜಾರಿ ಮತ್ತು ಶಶಿಕಲಾ ದಂಪತಿಯ ಪುತ್ರಿ. ತನ್ನ ಆಲ್ರೌಂಡರ್ ಆಟದಿಂದ ತಂಡದಲ್ಲಿ ಬಹುಬೇಡಿಕೆಯ ಕ್ರೀಡಾಪಟುವಾಗಿರುವ ಧನಲಕ್ಷ್ಮೀ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿಯೊಂದಿಗೆ ಡಿಪ್ಲೋಮಾ ಕೋರ್ಸ್ಗಳನ್ನು ಸಂಪೂರ್ಣ ಕ್ರೀಡಾ ದತ್ತು ಶಿಕ್ಷಣ ಯೋಜನೆಯಲ್ಲಿ ಉಚಿತವಾಗಿ ಪಡೆದಿದ್ದಾರೆ. ಇವರು ಜೂನಿಯರ್ ನ್ಯಾಷನಲ್, ಸೀನಿಯರ್ ನ್ಯಾಷನಲ್ ಹಾಗೂ ಫೆಡರೇಷನ್ ಕಪ್ನಲ್ಲಿ ಒಟ್ಟು 12 ಬಾರಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಈಗಾಗಲೇ ಸೀನಿಯರ್ ಹಾಗೂ ಜೂನಿಯರ್ ವಿಭಾಗದಲ್ಲಿ ೪ ಬಾರಿ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದಾರೆ.









