ಬೆಂಗಳೂರು: ಸರ್ಕಾರಿ ಬಸ್ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಮುದ್ರಿಸುವ ಮೂಲಕ ಸಾರಿಗೆ ಸಂಸ್ಥೆಗಳು ಆದಾಯದ ವ್ಯಾಮೋಹಕ್ಕೆ ಒಳಗಾಗಿವೆ ಎಂಬ ಮಾತುಗಳು ಕೇಳಿಬಂದಿದ್ದವು. ಪ್ರತಿಯೊಂದು ಸರ್ಕಾರಿ ಬಸ್ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತುಗಳು ರಾರಾಜಿಸುತ್ತಿದ್ದವು. ಈ ಬಗ್ಗೆ ಕನ್ನಡ ಸಂಘಟನೆಗಳು ಸೇರಿದಂತೆ ಜನರು ಕೂಡ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಇದೀಗ ಸರ್ಕಾರಿ ಬಸ್ಗಳ ಮೇಲಿನ ಜಾಹೀರಾತು ತೆಗೆಯಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಾಲ್ಕು ನಿಗಮಗಳಿಗೆ ಸೂಚನೆ ನೀಡಿದ್ದಾರೆ.
ಆದಾಯ ಹೆಚ್ಚಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಸಾರಿಗೆ ಬಸ್ಗಳ ಮೇಲೂ ಜಾಹೀರಾತುಗಳನ್ನು ಅಳವಡಿಸಲಾಗಿತ್ತು. ಅವುಗಳಲ್ಲಿ ಕೆಲವು ತಂಬಾಕು ಉತ್ಪನ್ನಗಳಿಗೆ ಸಂಬಂಧಿಸಿದ ಜಾಹೀರಾತುಗಳಾಗಿದ್ದವು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಪರಿಣಾಮವಾಗಿ, ಹಲವು ಕಡೆಗಳಲ್ಲಿ ಬಸ್ಗಳ ಮೇಲಿದ್ದ ಜಾಹೀರಾತುಗಳನ್ನು ಜನರು ಕಿತ್ತು ಹಾಕಿದ್ದ ಘಟನೆಗಳು ನಡೆದಿದ್ದವು.





