ಮಂಗಳೂರು, ಜೂನ್ 29: ಮಂಗಳೂರಿನ ಬೈಕಂಪಾಡಿ ಎಂಬಲ್ಲಿ ಹೆದ್ದಾರಿಯಲ್ಲಿ ಕೇರಳ ಮೂಲದ ಚಿನ್ನದ ವ್ಯಾಪಾರಿಯೊಬ್ಬರಿಂದ ಸಿನೀಮಿಯ ರೀತಿಯಲ್ಲಿ ದರೋಡೆ ಮಾಡಲಾಗಿದೆ.
ವಿಕಾಸ್ ಎಂಬ ಹೆಸರಿನ ಚಿನ್ನದ ವ್ಯಾಪಾರಿ ಮಹಾರಾಷ್ಟ್ರದಿಂದ ಮದುವೆ ಮುಗಿಸಿ ತನ್ನ ಕುಟುಂಬದೊಂದಿಗೆ ಕೇರಳಕ್ಕೆ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮುಂಜಾನೆ 4 ಗಂಟೆಯ ಸುಮಾರಿಗೆ, ಸುರತ್ಕಲ್ನ ಬೈಕಂಪಾಡಿ ಹೆದ್ದಾರಿಯಲ್ಲಿ ಖದೀಮರು ವಿಕಾಸ್ ಅವರ ಕಾರನ್ನು ಅಡ್ಡಗಟ್ಟಿದ್ದಾರೆ. ಖದೀಮರು ವಿಕಾಸ್ ಅವರ ಪತ್ನಿ ಮತ್ತು ಪುತ್ರನನ್ನು ಬೆದರಿಸಿ ಕಾರಿನಲ್ಲಿದ್ದ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಹಣವನ್ನು ದೋಚಿದ್ದಾರೆ. ದರೋಡೆಕೋರರು ಚಿನ್ನದೊಂದಿಗೆ ವಿಕಾಸ್ ಅವರ ಕಾರನ್ನೂ ಅಪಹರಿಸಿಕೊಂಡು ಹೋಗಿದ್ದಾರೆ. ಉಡುಪಿ-ಮಂಗಳೂರು ಸಂಪರ್ಕಿಸುವಂತಹ ರಾಷ್ಟ್ರೀಯ ಹೆದ್ದಾರಿಯಲ್ಲೇ ಈ ಕೃತ್ಯ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ರಸ್ತೆಯು ನಿರಂತರ ವಾಹನ ಸಂಚಾರದಿಂದ ಕೂಡಿದ್ದು, ಇಂತಹ ಘಟನೆ ನಡೆದಿರುವುದು ಪೊಲೀಸರ ನಿದ್ದೆಗೆಡಿಸಿದೆ.
ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ದರೋಡೆಕೋರರು ಎರಡು ಇನ್ನೋವಾ ಮತ್ತು ಒಂದು ಸ್ವಿಫ್ಟ್ ಕಾರುಗಳಲ್ಲಿ ಬಂದಿದ್ದರೆಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಈ ಕೃತ್ಯದ ಹಿಂದೆ ಚಿನ್ನದ ವ್ಯಾಪಾರಿಯ ಚಲನವಲನಗಳ ಬಗ್ಗೆ ನಿಖರ ಮಾಹಿತಿ ಹೊಂದಿರುವವರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.



