ಬೆಂಗಳೂರು: ಕರಾವಳಿ ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮುಖಂಡನಿಂದಲೇ ಹನಿಟ್ರ್ಯಾಪ್ ನಡೆದಿರುವುದು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಉದ್ಯಮಿಯೊಬ್ಬರಿಗೆ ಅಶ್ಲೀಲ ವಿಡಿಯೋ ಮೂಲಕ ಬೆದರಿಸಿ ಕೋಟಿ ಕೋಟಿ ರೂಪಾಯಿ ಹಣ ಸುಲಿಗೆ ಮಾಡಿದ್ದ ಕಾಂಗ್ರೆಸ್ ಯುವ ನಾಯಕ ಸೇರಿ ಇಬ್ಬರನ್ನು ಮಂಗಳೂರು ಪೂರ್ವ ಠಾಣೆಯ ಪೊಲೀಸರು ಬಂಧಿಸಿದ ಘಟನೆ ಮಂಗಳವಾರ ನಡೆದಿದೆ.
ಬಂಧಿತ ಆರೋಪಿಗಳಲ್ಲಿ ಓರ್ವ ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಝಾಮ್, ಮತ್ತೊಬ್ಬ ಜಿತೇಶ್ ಬಂಧಿತರು. ಉದ್ಯಮಿಯೋಬ್ಬರನ್ನು ಜಿತೇಶ್ ಎಂಬಾತ ವಿಡಿಯೋ ಇನ್ನಿತರ ಕಾರಣಗಳನ್ನು ಇಟ್ಟುಕೊಂಡು ನಿರಂತರವಾಗಿ ಹನಿಟ್ರ್ಯಾಪ್ ಮಾಡುತ್ತಿದ್ದ. ಸಂತ್ರಸ್ತರಿಂದ ಕೋಟ್ಯಾಂತರ ಹಣ ಸುಲಿಗೆ ಮಾಡುತ್ತಿದ್ದ. ಕಾಂಗ್ರೆಸ್ ಮುಖಂಡ ನಿಝಾಮ್ ಸಹಿತ ಅದೇ ಕಾಯಕವನ್ನು ಮುಂದುವರಿಸಿದ್ದು, ಇದೀಗ ಉದ್ಯಮಿ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ.
ಉದ್ಯಮಿ ಗೆಅಶ್ಲೀಲ ವಿಡಿಯೋ ತೋರಿಸಿ ಬೆದರಿಸಿದ ನಿಝಾಮ್ ಒಟ್ಟು 2.77 ಕೋಟಿ ರೂಪಾಯಿ ವಸೂಲಿ ಮಾಡಿದ್ದಾನೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಸದ್ಯ ಆಡಳಿತ ಪಕ್ಷದ ಯುವ ನಾಯಕನೊಬ್ಬ ಹನಿಟ್ರ್ಯಾಪ್ ಮಾಡಿ ಪೊಲೀಸರ ಅತಿಥಿ ಆಗಿದ್ದು ಭಾರೀ ಸುದ್ದಿಯಾಗಿದೆ. ರಾಜ್ಯ ಬಿಜೆಪಿಯು ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರನ್ನು ಎಕ್ಸ್ ಪೋಸ್ಟ್ನಲ್ಲಿ ಟ್ಯಾಗ್ ಮಾಡಿ ತರಾಟೆಗೆ ತೆಗೆದುಕೊಂಡಿದೆ. ನಿಝಾಮ್ನನ್ನು ಪಕ್ಷದಿಂದ ಕಾಂಗ್ರೆಸ್ ಉಚ್ಛಾಟನೆ ಮಾಡಿದೆ.





