ಮೂಡುಬಿದಿರೆ: ಇಲ್ಲಿನ ಬಸ್ ನಿಲ್ದಾಣದಲ್ಲಿರುವ ಮೊಬೈಲ್ ಅಂಗಡಿಗೆ ತಲವಾರು ಹಿಡಿದು ನುಗ್ಗಿ ಸಿಬ್ಬಂದಿಯನ್ನು ಬೆದರಿಸಿ ಆತಂಕ ಸೃಷ್ಟಿಸಿದ್ದ ಪ್ರಕರಣದಲ್ಲಿ ಬಂಧಿತನಾಗಿರುವ ಯುವಕ ಪೆರಿಂಜೆ ಸಮೀಪದ ಬಡಕೋಡಿಯ ರಾಜೇಶ ಎಂದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟೆಬಾಗಿಲಿನ ಸಂದೇಶ್ನನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶನಿವಾರ ಮಧ್ಯಾಹ್ನ ನಡೆದ ಘಟನೆಯಲ್ಲಿ ರಾಜೇಶ ಮೊಬೈಲ್ ಅಂಗಡಿಗೆ ನುಗ್ಗಿ ತಲವಾರು ಬೀಸಿ ಸಿಬ್ಬಂದಿಯನ್ನು ಬೆದರಿಸಿ ಗಾಬರಿ ಸೃಷ್ಟಿಸಿದ್ದಾನೆ. ಈ ವೇಳೆ ಅಂಗಡಿಯ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಉಪಾಯದಿಂದ ರಾಜೇಶನನ್ನು ಅಂಗಡಿಯೊಳಗೆ ಲಾಕ್ ಮಾಡಿ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಪ್ರಾಥಮಿಕ ವಿಚಾರಣೆ ವೇಳೆ ರಾಜೇಶ ತಾನು ವಾಮದಪದವು ನಿವಾಸಿಯಾಗಿದ್ದು. ಪ್ರಸ್ತುತ ಪೆರಿಂಜೆಯ ಬಡಕೋಡಿಯಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ಅಲ್ಲದೆ, ತನ್ನ ಬಳಿ ಇದ್ದ ತಲವಾರನ್ನು ಕೋಟೆಬಾಗಿಲಿನ ಸಂದೇಶ್ ನೀಡಿದ್ದಾನೆ ಎಂದು ವಿಚಾರಣೆಯಲ್ಲಿ ಹೇಳಿರುವುದಾಗಿ ತಿಳಿದು ಬಂದಿದೆ. ಈ ಮಾಹಿತಿ ಆಧರಿಸಿ ಪೊಲೀಸರು ಸಂದೇಶ್ನನ್ನೂ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದು, ತಲವಾರು ನೀಡಿದ ಹಿನ್ನೆಲೆ ಹಾಗೂ ಘಟನೆಯ ಉದ್ದೇಶ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.



