ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ: ಅಧಿಕಾರಿಗಳಿಗೆ ಶಾಸಕ ಹರೀಶ್ ಪೂಂಜ ಸೂಚನೆ


ವೇಣೂರು: ಜನರ ಸಮಸ್ಯೆಗಳನ್ನು ಅಧಿಕಾರಿಗಳು ತಕ್ಷಣವೇ ಆಲಿಸಿ, ಸೂಕ್ತ ಪರಿಹಾರ ಕಂಡುಕೊಳ್ಳುವ ಕಾರ್ಯ ಮಾಡಬೇಕು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ವೇಣೂರು ಹೋಬಳಿಯ ಗ್ರಾಮಗಳಿಗೆ ಸಂಬಂಧಿಸಿ ವೇಣೂರು ಗ್ರಾ.ಪಂ. ಆಶ್ರಯದಲ್ಲಿ ಸೆ. ೪ರಂದು ವೇಣೂರು ಶ್ರೀ ಭರತೇಶ ಸಮುದಾಯ ಭವನದಲ್ಲಿ ನಡೆದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಈ ಹಿಂದೆ ನಡೆದ ಜನಸ್ಪಂದನ ಕಾರ್ಯಕ್ರಮದ ಮಾದರಿಯಲ್ಲೇ ಈ ಜನಾಂದೋಲನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸರ್ಕಾರ ಯಾವುದೇ ಇರಲಿ, ಆಡಳಿತವು ನೇರವಾಗಿ ಜನರ ಬಳಿಗೇ ತಲುಪುವುದು ಒಂದು ಉತ್ತಮ ಕಲ್ಪನೆಯಾಗಿದೆ ಎಂದರು.
ಮುಂದುವರಿದು ಮಾತನಾಡಿದ ಅವರು, ಸಮಾಜದಲ್ಲಿರುವ ವಿವಿಧ ಸಾಮಾಜಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಅವುಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ತಾಲೂಕಿನಾದ್ಯಂತ ನಡೆಯುವ ಎಲ್ಲಾ ಸಭೆಗಳಲ್ಲೂ ಅಧಿಕಾರಿಗಳ ಜೊತೆ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ ಎಂದು ತಿಳಿಸಿದರು.

ಅರ್ಹ ಫಲಾನುಭವಿಗಳಿಗೆ ಯೋಜನೆಯ ಪೂರ್ಣಪ್ರಯೋಜನ
ಬೆಳ್ತಂಗಡಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಅವರು ಮಾತನಾಡಿ, ಸರಕಾರದ ಗ್ಯಾರಂಟಿ ಯೋಜನೆಗಳನ್ನು ಒಂದೊಂದಾಗಿ ಪರಿಷ್ಕರಣೆ ಮಾಡಲಾಗುತ್ತಿದೆ. ನಿಜವಾದ ಫಲಾನುಭವಿಗಳನ್ನು ಗುರುತಿಸುವ ಮಹತ್ವಕಾರ್ಯ ಸರಕಾರದ ವತಿಯಿಂದ ನಡೆಯುತ್ತಿದ್ದು, ಪಕ್ಷ, ಧರ್ಮ ಬೇಧವಿಲ್ಲದೆ ಅರ್ಹ ಫಲಾನುಭವಿಗಳಿಗೆ ಯೋಜನೆಯ ಪೂರ್ಣಪ್ರಯೋಜನ ದೊರಕಿಸುವುದು ನಮ್ಮ ಉದ್ದೇಶ ಎಂದರು.
ಬೆಳ್ತಂಗಡಿ ತಹಶೀಲ್ದಾರ್ ಎಸ್.ಎನ್. ನರಗುಂದ್, ವೇಣೂರು ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಕಾಶಿನಾಥ್ ಹೆಗ್ಡೆ, ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ರವಿ ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಅವರು ಪ್ರಾಸ್ತಾವಿಸಿದರು. ವೇಣೂರು ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಸ್ವಾಗತಿಸಿದರು. ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ತಮ್ಮ ಇಲಾಖೆಯ ಮಾಹಿತಿ ನೀಡಿದರು.
ಗುರುವಾಯನಕೆರೆ-ಪೆರಿಂಜೆ ರಾಜ್ಯ ಹೆದ್ದಾರಿ ದುರಸ್ತಿಯ ಬಗ್ಗೆ ಪ್ರಸ್ತಾಪಿಸಿದ ಶಾಸಕರು
ಗುರುವಾಯನಕೆರೆ-ಪೆರಿಂಜೆ ರಾಜ್ಯ ಹೆದ್ದಾರಿ ದುರಸ್ತಿಗೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗೋಪಾಲ್ ಅವರನ್ನು ಶಾಸಕರು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಇಂಜಿನಿಯರ್ ಪ್ರಸ್ತಾವಣೆ ಸಲ್ಲಿಕೆಯಾಗಿ ಟೆಂಡರ್ ಆಗಿದೆ. ಸರಕಾರದಿಂದ ಕಾರ್ಯದೇಶ ದೊರೆತ ಕೂಡಲೇ ದುರಸ್ತಿ ಕಾರ್ಯನಡೆಸಲಾಗುವುದು ಎಂದರು.



