ಬೆಂಗಳೂರು: ದಸರಾ ರಜೆಗಳನ್ನು ವಿಸ್ತರಿಸಿದ್ದರಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕೊರತೆಯಾಗುವ ಶಾಲಾ ದಿನಗಳ ಬೋಧನಾ ಕಲಿಕೆ ಸರಿದೂಗಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ದಸರಾ ರಜೆಗಳನ್ನು ವಿಸ್ತರಿಸಿದ ಪರಿಣಾಮವಾಗಿ ಶಾಲಾ ದಿನಗಳ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ, ಕಲಿಕಾ ಅವಧಿಯನ್ನು ಸಮತೋಲನಗೊಳಿಸಲು ಶಿಕ್ಷಣ ಇಲಾಖೆ ಮಹತ್ವದ ಹಾಗೂ ಬಾಧ್ಯತೆಯ ನಿರ್ಧಾರ ಪ್ರಕಟಿಸಿದೆ.
ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ದಸರಾ ರಜಾ ಅವಧಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರನ್ನು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿದ್ದು, ಸದರಿ ಕಾರ್ಯ ದಸರಾ ರಜೆಯಲ್ಲಿ ಆರಂಭಗೊಂಡಿರುತ್ತದೆ. ಸಮೀಕ್ಷೆ ಪೂರ್ಣಗೊಳ್ಳದ ಕಾರಣ ಉಲ್ಲೇಖ(4) ರಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಬೆಂಗಳೂರು ರವರು ಮುಖ್ಯ ಮಂತ್ರಿಗಳಿಗೆ ನೀಡಿದ ಮನವಿ ಪತ್ರ ದಿನಾಂಕ:06.10.2025 ರಲ್ಲಿ ಈ ಸಮೀಕ್ಷೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಕಾಲಾವಕಾಶ ಅವಶ್ಯಕತೆ ಇದ್ದು ಸಮೀಕ್ಷೆಯನ್ನು ಪೂರ್ಣಗೊಳಿಸಲು ಶಾಲೆಗಳಿಗೆ ಹೆಚ್ಚುವರಿ ದಸರಾ ರಜೆಗಳನ್ನು ನೀಡಿ ಸಮೀಕ್ಷೆ ಪೂರ್ಣಗೊಳಿಸಲು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿರುತ್ತಾರೆ ಹಾಗೂ ವಿದ್ಯಾರ್ಥಿಗಳಿಗೆ ಮುಂದೆ ವಿಶೇಷ ಬೋಧನಾ ಅವಧಿಗಳನ್ನು ನಡೆಸಲಾಗುವುದು ಎಂದಿರುತ್ತಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ ಇವರು ನಮೂದಿಸಿದ ಟಿಪ್ಪಣಿಯಲ್ಲಿ ಸದರಿ ಮನವಿ ಕುರಿತು ಮುಖ್ಯ ಮಂತ್ರಿಗಳು ನೀಡುವ ಸೂಚನೆಯಂತೆ ಕ್ರಮವಹಿಸಿ ಎಂದು ನಿರ್ದೇಶಿಸಿರುತ್ತಾರೆ.









