ವೇಣೂರು: ಗುರು-ಶಿಷ್ಯೆಯರ ಅಪೂರ್ವ ಪ್ರೀತಿ ಮತ್ತು ಕೃತಜ್ಞತೆಯ ಕ್ಷಣ ಸಭಿಕರ ಮನ ಗೆಲ್ಲುವ ಜೊತೆಗೆ ಕೃತಜ್ಞತಾ ಭಾವಕ್ಕೆ ಇಂದು ವೇಣೂರು ಗ್ರಾಮ ಪಂಚಾಯತು ಸಾಕ್ಷಿಯಾಯಿತು!
ಇತ್ತೀಚೆಗೆ ಪಿಡಿಒ ಆಗಿ ಪದೋನ್ನತಿ ಪಡೆದ ಶ್ರೀಮತಿ ವನಜಾ ಅವರಿಗೆ ವೇಣೂರು ಗ್ರಾ.ಪಂ.ನಲ್ಲಿ ಗೌರವ ಸಮರ್ಪಣೆ ಏರ್ಪಡಿಸಲಾಗಿತ್ತು. ಆದರೆ, ವೇದಿಕೆಯಲ್ಲಿ ತನಗೆ ನೀಡಿದ ಗೌರವವನ್ನು ವಿನಮ್ರವಾಗಿ ನಿರಾಕರಿಸಿದ ಅವರು, ನನ್ನ ಈ ಹಂತದ ಸಾಧನೆಗೆ ಅಡಿಪಾಯ ಹಾಕಿದವರು ನನ್ನ ಪ್ರೌಢಶಾಲಾ ಶಿಕ್ಷಕರಾದ ಶ್ರೀಧರ ರೈ ಅವರು. ಹೀಗಾಗಿ ಈ ಸನ್ಮಾನ ಅವರಿಗೆ ಸಲ್ಲಬೇಕು ಎಂದು ಹೇಳಿ, ಗುರುಗಳಿಂದಲೇ ಅದನ್ನು ಸ್ವೀಕರಿಸುವಂತೆ ಮಾಡಿ ನೆರೆದಿದ್ದವರ ಮೆಚ್ಚುಗೆಗೆ ಪಾತ್ರರಾದರು.
ಹುದ್ದೆಯಲ್ಲಿ ಬಡ್ತಿ ಸಿಕ್ಕು ಲಭಿಸಿದ ಗೌರವದ ಸನ್ಮಾನವನ್ನು ತಾನು ಸ್ವೀಕರಿಸುವ ಬದಲು, ತನಗೆ ಅಕ್ಷರ ಕಲಿಸಿದ ಗುರುಗಳ ಚರಣಗಳಿಗೆ ಅರ್ಪಿಸುವ ಮೂಲಕ ನೂತನ ಪಿಡಿಒ ವನಜಾ ಅವರು ಅಪೂರ್ವ ಗುರುಭಕ್ತಿಗೆ ಸಾಕ್ಷಿಯಾದರು.



ತಮಗೆ ಪ್ರೌಢಶಿಕ್ಷಣದ ಹಂತದಿಂದಲೇ ಮಾರ್ಗದರ್ಶನ ನೀಡಿದ್ದ ಪೆರಿಂಜೆ ಎಸ್ಡಿಎಂ ಅನುದಾನಿತ ಶಾಲೆಯ ಶಿಕ್ಷಕರಾದ ಶ್ರೀಧರ ರೈ ಅವರನ್ನು ವೇದಿಕೆಗೆ ಕರೆಸಿದ ಅವರು, ತಮಗೆ ಬಂದ ಸನ್ಮಾನದ ನೆನಪಿನ ಕಾಣಿಕೆ ಹಾಗೂ ಗೌರವವನ್ನು ಗುರುಗಳಿಂದಲೇ ಸ್ವೀಕರಿಸುವಂತೆ ವಿನಂತಿಸಿಕೊಂಡರು. ಶಿಷ್ಯೆಯ ಸಾರ್ವಜನಿಕ ಸೇವೆ ಹಾಗೂ ಕೃತಜ್ಞತಾ ಭಾವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಗುರು ಶ್ರೀಧರ ರೈ ಅವರು ಹೆಮ್ಮೆಯಿಂದ ಸನ್ಮಾನ ಸ್ವೀಕರಿಸಿ, ಶಿಷ್ಯೆಯ ಉನ್ನತ ಭವಿಷ್ಯಕ್ಕೆ ಶುಭ ಹಾರೈಸಿದರು.
ಬಳಿಕ ಪಂಚಾಯತ್ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಮತಿ ವನಜಾ ಅವರು, ನನ್ನ ಈ ಸಾಧನೆ ಮತ್ತು ಉನ್ನತ ಹುದ್ದೆಗೆ ನನಗೆ ಬಾಲ್ಯದಲ್ಲಿ ವಿದ್ಯೆ ಕಲಿಸಿ, ಉತ್ತಮ ಮಾರ್ಗದರ್ಶನ ನೀಡಿದ ನನ್ನ ಗುರುಗಳೇ ಕಾರಣ. ಆದ್ದರಿಂದ ಈ ಸನ್ಮಾನ ನನಗೆ ನೀಡುವ ಬದಲು ನನ್ನ ಪೂಜ್ಯ ಗುರುಗಳಿಗೆ ಸಲ್ಲಬೇಕು ಎಂದು ಭಾವನಾತ್ಮಕವಾಗಿ ನುಡಿದರು.
ಈ ಸಂದರ್ಭದಲ್ಲಿ ವೇಣೂರು ಗ್ರಾ.ಪಂ.ನ ಪಿಡಿಒ ಪ್ರಕಾಶ್, ನಿಕಟಪೂರ್ವ ಅಧ್ಯಕ್ಷರುಗಳಾದ ಮಲ್ಲಿಕಾ ಹೆಗ್ಡೆ, ನೇಮಯ್ಯ ಕುಲಾಲ್, ಪಂಚಾಯತ್ ಕಾರ್ಯದರ್ಶಿಗಳು, ನಿಕಟಪೂರ್ವ ಸದಸ್ಯರುಗಳು ಉಪಸ್ಥಿತರಿದ್ದರು



