ವೇಣೂರು: ಸಿನಿಮಾದ ಪಾತ್ರಕ್ಕಾಗಿ ಕಳೆದ ಹತ್ತು ವರ್ಷಗಳಿಂದ ಸುದೀರ್ಘವಾಗಿ ಬೆಳೆಸಿದ್ದ ತಮ್ಮ ಕೂದಲನ್ನು ನಟ-ನಿರೂಪಕ ದೀಕ್ಷಿತ್ ಅಂಡಿಂಜೆ ಕ್ಯಾನ್ಸರ್ ಪೀಡಿತ ರೋಗಿಗಳ ನೆರವಿಗಾಗಿ ಕೇಶದಾನ ಮಾಡುವ ಮೂಲಕ ಸಮಾಜಮುಖಿ ಕಾಳಜಿ ಮೆರೆದಿದ್ದಾರೆ.

ಚಿತ್ರರಂಗದಲ್ಲಿ ವಿಭಿನ್ನ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡಿರುವ ದೀಕ್ಷಿತ್ ಅಂಡಿಂಜೆ, ಕ್ಯಾನ್ಸರ್ ಚಿಕಿತ್ಸೆಯಿಂದ ಕೂದಲು ಕಳೆದುಕೊಂಡಿರುವ ರೋಗಿಗಳಿಗೆ ವಿಗ್ ತಯಾರಿಸಲು ತಮ್ಮ ಕೂದಲನ್ನು ದಾನ ಮಾಡಿದರು. ಅವರ ಈ ಮಾನವೀಯ ಕಾರ್ಯಕ್ಕೆ ಕರಾವಳಿ ಭಾಗ ಸೇರಿದಂತೆ ವಿವಿಧ ವಲಯಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಆತ್ಮವಿಶ್ವಾಸ ಮೂಡಿಸುವ ಕಾರ್ಯ ಈ ಕುರಿತು ಮಾತನಾಡಿದ ದೀಕ್ಷಿತ್ ಅಂಡಿಂಜೆ, “ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ರೋಗಿಗಳ ಬದುಕಿನಲ್ಲಿ ಆತ್ಮವಿಶ್ವಾಸ ಮತ್ತು ಹೊಸ ಭರವಸೆ ಮೂಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಾಧ್ಯವಾದಷ್ಟು ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗಬೇಕು. ಕೇಶದಾನವು ಸಣ್ಣ ಕಾರ್ಯವಾಗಿದ್ದರೂ, ಅದು ಯಾರಿಗಾದರೂ ದೊಡ್ಡ ಸಂತೋಷ ಮತ್ತು ಆತ್ಮಸ್ಥೆರ್ಯ ನೀಡಬಲ್ಲದು ಎಂದು ಹೇಳಿದರು.
ಹತ್ತು ವರ್ಷದ ಸಂಕಲ್ಪ ಸಮಾಜಸೇವೆಗೆ ಸಿನಿಮಾದ ಪಾತ್ರಕ್ಕಾಗಿ ಕಳೆದ ಹತ್ತು ವರ್ಷಗಳಿಂದ ಬೆಳೆಸಿದ್ದ ಕೂದಲನ್ನು ಸಮಾಜಮುಖಿ ಉದ್ದೇಶಕ್ಕಾಗಿ ದಾನ ಮಾಡುವ ಮೂಲಕ ದೀಕ್ಷಿತ್ ಅಂಡಿಂಜೆ ಕಲೆಯೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನೂ ಸಮಾನವಾಗಿ ನಿಭಾಯಿಸಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಯಿಂದ ಕೂದಲು ಕಳೆದುಕೊಂಡಿರುವ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಮಾಡಿದ ಈ ಕೇಶದಾನ ಸಾರ್ವಜನಿಕರು, ಅಭಿಮಾನಿಗಳಿಂದ ಶ್ಲಾಘನೆಗೆ ಪಾತ್ರವಾಗಿದೆ.



