2026 ಮಾರ್ಚ್ ತಿಂಗಳಲ್ಲಿ ಏರಿಕೆ ಆಗಿದ್ದ ವಾಣಿಜ್ಯ ಬಳಕೆಯ ಸಿಲಿಂಡರ್ (19ಕೆಜಿ ಗ್ಯಾಸ್) ದರ ಇಂದು ಮೇ 1ರಂದು ಶುಕ್ರವಾರ ಮತ್ತೆ ಬರೋಬ್ಬರಿ 991 ರೂಪಾಯಿ ಏರಿಕೆ ಆಗಿದೆ ಈ ಮೂಲಕ ಕೇಂದ್ರ ಸರ್ಕಾರ ಕಾರ್ಮಿಕರ ದಿನದಂದು ಜನರಿಗೆ ಆಘಾತ ನೀಡಿದೆ. ‘ಪಂಚ ರಾಜ್ಯ ಚುನಾವಣೆ ಮುಗಿದ ಬಳಿಕ ಪ್ರಧಾನಿ ಮೋದಿಯವರ ತಮ್ಮ ಬುದ್ಧಿ ತೋರಿಸಿದ್ದಾರೆ’ ಎಂದು ಹೋಟೆಲ್ ಮಾಲೀಕರು ದೂರಿದ್ದಾರೆ. ದರ ಏರಿಕೆಗೆ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ಇತಿಹಾಸದಲ್ಲೇ ದೊಡ್ಡಮಟ್ಟದ ಗ್ಯಾಸ್ ದರ ಏರಿಕೆ ಆಗಿದ್ದು, ಈ ನಿರ್ಧಾರವು ನೇರ ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬೀರಲಿದೆ ಎಂದು ಹೋಟೆಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
ಊಟ-ತಿಂಡಿ ದರ ಏರಿಕೆ ಅನಿವಾರ್ಯ!
ಜನರಿಗೂ ಬರೆ ಬೆಂಗಳೂರು ಸೇರಿ ರಾಜ್ಯದಲ್ಲಿ ಅಗತ್ಯ ವಸ್ತುಗಳು, ಸಾರಿಗೆ ಪ್ರಯಾಣ ದರ ಏರಿಕೆಯಿಂದ ಜನರು ಕಂಗಾಲಾಗಿದ್ದರು. ನೌಕರ ವರ್ಗವು ಉದ್ಯೊಗ ವಜಾ ಎದುರಿಸುತ್ತಿದೆ. ಇದೆಲ್ಲದರ ಮಧ್ಯೆ ಬೆಲೆಗಳು ಏರಿಕೆ ಆಗುತ್ತಿವೆ. ಇದೀಗ ವಾಣಿಜ್ಯ ಸಿಲಿಂಡರ್ ದರ ಏರಿಕೆಯಿಂದ ಹೋಟೆಲ್, ಊಟ-ತಿಂಡಿ, ಟೀ-ಕಾಫಿ ಬೆಲೆ ಏರಿಕೆ ಮಾಡುವ ಬಗ್ಗೆ ಹೋಟೆಲ್ ಉದ್ಯಮಿಗಳು ಗಂಭೀರ ಚಿಂತನೆ ಮಾಡಿದ್ದಾರೆ.
ಈ ಹಿಂದೆ ತಾತ್ಕಾಲಿಕವಾಗಿ ಗ್ಯಾಸ್ ಹೆಚ್ಚಳದ (ಪೂರೈಕೆ ಕೊರತೆ ಹಿನ್ನೆಲೆ ಬ್ಲಾಕ್ನಲ್ಲಿ ಅಧಿಕ ಬೆಲೆ ಗ್ಯಾಸ್ ಖರೀದಿ) ದರವನ್ನು ಹೋಟೆಲ್ ಊಟ ತಿಂಡಿ ಬಿಲ್ನಲ್ಲಿ ಜನರಿಗೆ ವಸೂಲಿ ಮಾಡಲಾಗಿತ್ತು. ಇನ್ನೇನು ಹಾರ್ಮುಜ್ ಜಲಸಂಧಿಯಿಂದ ತೈಲದ ಹಡಗು ಬರುತ್ತಿವೆ, ಸಮಸ್ಯೆಗೆ ಪರಿಹಾರ ಸಿಕ್ಕಿತು ಎನ್ನುವಷ್ಟರಲ್ಲಿ ಕೇಂದ್ರವು ಅನಿಲ ದರ ಏರಿಕೆ ಮಾಡಿದೆ. ಹೋಟೆಲ್ ಉತ್ಪನ್ನಗಳ ದರ ಹೆಚ್ಚಾದರೆ ಅದರ ನೇರ ಪರಿಣಾಮ ಹೋಟೆಲ್ ಉದ್ಯಮ ಮತ್ತು ಗ್ರಾಹಕರ ಮೇಲೆ ಉಂಟಾಗುತ್ತದೆ. ದರ ಏರಿಕೆ ನಿರ್ಧಾರ ಸರಿಯಲ್ಲ ಎಂಬ ಸಾರ್ವಜನಿಕ ಆಕ್ರೋಶಗಳು ವ್ಯಕ್ತವಾಗಿವೆ.





