ಬೆಂಗಳೂರು, ಜು. 31: ಸದ್ಯ ದೇಶದಲ್ಲಿಯೇ ಅತಿಹೆಚ್ಚು ಕಳ್ಳತನ ಆಗುವ ವಸ್ತು ಅಂದ್ರೆ ಅದು ಮೊಬೈಲ್ ಫೋನ್ಗಳು. ಈ ಬಗ್ಗೆ ಪ್ರತಿನಿತ್ಯವೂ ಸಾವಿರಾರು ದೂರುಗಳು ದಾಖಲಾಗುತ್ತವೆ. ಬಹುತೇಕರು ಕಳುವಾಗಿರುವ ತಮ್ಮ ಬೊಬೈಲ್ ಆಸೆಯನ್ನೇ ಬಿಟ್ಟಿರುತ್ತಾರೆ. ಆದರೆ ಕಳುವಾದ ಮೊಬೈಲ್ಗಳನ್ನು ಪತ್ತೆ ಮಾಡಿ ವಾಪಸ್ ಕೊಡಿಸುವುದರಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ದೇಶದಲ್ಲಿ ಹೆಚ್ಚು ಮೊಬೈಲ್ ಕಳ್ಳತನ ಪ್ರಕರಣಗಳು ದಾಖಲಾದ ಟಾಪ್ 5 ರಾಜ್ಯಗಳ ಪೈಕಿ, ರಿಕವರಿ ಶೇಕಡಾವಾರು ಆಧಾರದಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಗಮನಾರ್ಹ ಸಾಧನೆ ಮಾಡಿದೆ.

ಕರ್ನಾಟಕದಲ್ಲಿ ಒಂದು ವರ್ಷಕ್ಕೆ 5 ಲಕ್ಷದ 71 ಸಾವಿರ ಮೊಬೈಲ್ ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ಇವುಗಳನ್ನು ಭಾರತ ಸರ್ಕಾರದ ಸಿಇಐಆರ್ ಪೋರ್ಟಲ್ ಮೂಲಕ ರಿಕವರಿ ಕಾರ್ಯ ನಡೆಸಲಾಗುತ್ತಿದೆ. ಮೊಬೈಲ್ IMEI ನಂಬರ್ ಮೂಲಕ ಕಳುವಅದ ಮೊಬೈಲ್ಗಳ ಮೇಲೆ ನಿಗಾ ಇಡಲಾಗುವ ಕಾರಣ ಅವನ್ನು ಯಾರು ಬಳಸಿದರೂ ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಅಲರ್ಟ್ ಆಗಲಿದೆ. ಇದರ ಆಧಾರದಲ್ಲಿ ಭಾರತದಲ್ಲಿ ಪತ್ತೆ ಮಾಡಲಾಗಿರುವ ಮೊಬೈಲ್ಗಳ ಅಂಕಿ-ಅಂಶ ಗಮನಿಸಿದಾಗ ಕರ್ನಾಟಕವೇ ಮೊಬೈಲ್ಗಳ ರಿಕವರಿಯಲ್ಲಿ ಮುಂಚೂಣಿಯಲ್ಲಿರೋದು ಕಂಡುಬಂದಿದೆ.
ಭಾರತದಲ್ಲಿ ಅತಿಹೆಚ್ಚು ಮೊಬೈಲ್ ಕಳ್ಳತನ ಮೊಬೈಲ್ ಸ್ನಾಚಿಂಗ್ ಪ್ರಕರಣಗಳ ಸಂಖ್ಯೆ ಸಹ ಇದೇ ಐದು ರಾಜ್ಯಗಳಲ್ಲಿ ಹೆಚ್ಚಿದ್ದು, ಸದ್ಯ ಒಂದು ಹಂತಕ್ಕೆ ಪೊಲೀಸರು ರಿಕವರಿ ಮಾಡಿ ಕೊಡುವುದರಲ್ಲಿ ಯಶಸ್ವಿಯಾಗಿ ಕೆಲಸ ಮಾಡುತಿದ್ದಾರೆ.



