₹50 ಲಕ್ಷ ವಾರ್ಷಿಕ ವೇತನ, ಪ್ರತಿಷ್ಠಿತ IIMನಲ್ಲಿ MBA ಪದವಿ, ಫಿಯಟ್, ವೋಕ್ಸ್ವ್ಯಾಗನ್ನಂತಹ ಜಾಗತಿಕ ಕಂಪನಿಗಳಲ್ಲಿ ಕೆಲಸ.. ಹೀಗೆ ಯಶಸ್ವಿ ಕಾರ್ಪೊರೇಟ್ ಬದುಕಿನಲ್ಲಿದ್ದ 37 ವರ್ಷದ ಯುವತಿಯೊಬ್ಬರು ಎಲ್ಲವನ್ನೂ ತ್ಯಜಿಸಿ ಜೈನ ಸನ್ಯಾಸದ ಹಾದಿ ಹಿಡಿದಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಅವರ 61 ವರ್ಷದ ತಾಯಿಯೂ ಮಗಳ ಜೊತೆ ಸನ್ಯಾಸ ಸ್ವೀಕರಿಸಲು ನಿರ್ಧರಿಸಿದ್ದಾರೆ. ವೃತ್ತಿ, ಸಂಪತ್ತು, ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸಿದ ಬಳಿಕ ಆಧ್ಯಾತ್ಮಿಕ ಬದುಕಿನತ್ತ ಮುಖ ಮಾಡಿದ ಈ ತಾಯಿ-ಮಗಳ ನಿರ್ಧಾರ ಇದೀಗ ಗಮನ ಸೆಳೆದಿದೆ.




ಅಕ್ಷಿತಾ ಒಬ್ಬರೇ ಈ ನಿರ್ಧಾರ ಕೈಗೊಂಡಿಲ್ಲ. ಅವರ 61 ವರ್ಷದ ತಾಯಿ ಶಿರೋಮಣಿ ಬಜಾಜ್ ಕೂಡ ಜೈನ ಸನ್ಯಾಸಿನಿಯಾಗಲು ನಿರ್ಧರಿಸಿದ್ದಾರೆ. ಗುರುಗ್ರಾಮದ ತಾಯಿ-ಮಗಳು ಜೋಡಿ ತಮ್ಮ ವೃತ್ತಿ, ಕುಟುಂಬ ಜೀವನವನ್ನು ತ್ಯಜಿಸಿ ಜೈನ ಸಾಧ್ವಿಗಳಾಗಿ ದೀಕ್ಷೆ ಪಡೆಯಲು ಸಿದ್ಧರಾಗಿದ್ದಾರೆ.

IIM ಬೆಂಗಳೂರಿನಿಂದ ಜೈನ ಸನ್ಯಾಸದತ್ತ ಅಕ್ಷಿತಾ
IIM ಬೆಂಗಳೂರಿನಲ್ಲಿ MBA ಪದವಿ ಪಡೆದಿರುವ ಅಕ್ಷಿತಾ, ಫಿಯಟ್, ಮರ್ಸಿಡಿಸ್ ಬೆಂಜ್ ಮತ್ತು ವೋಕ್ಸ್ವ್ಯಾಗನ್ ಸೇರಿದಂತೆ ಪ್ರಮುಖ ಆಟೋಮೊಬೈಲ್ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ವೋಕ್ಸ್ವ್ಯಾಗನ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು, ವಾರ್ಷಿಕ ಸುಮಾರು ₹50 ಲಕ್ಷ ವೇತನ ಪಡೆಯುತ್ತಿದ್ದರು ಎನ್ನಲಾಗಿದೆ
ಉದ್ಯೋಗ ತೊರೆಯಲು ಕಾರಣವೇನು?
ಕಂಪನಿಯಲ್ಲಿ ಕೃತಕ ಬುದ್ಧಿಮತ್ತೆ (AI) ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದ ವೇಳೆ ಅಕ್ಷಿತಾ ಅವರಲ್ಲಿ ಆಧ್ಯಾತ್ಮಿಕ ಚಿಂತನೆ ಹೆಚ್ಚಾಯಿತು ಎನ್ನಲಾಗಿದೆ. ಡೇಟಾ ಸೆಂಟರ್ಗಳ ನಿರ್ಮಾಣಕ್ಕಾಗಿ ಭೂಮಿ ಅಗೆಯುವುದು, ಇದರಿಂದ ಪರಿಸರಕ್ಕೆ ಉಂಟಾಗುವ ಹಾನಿ ಮತ್ತು ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳ ನಾಶದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದರು.
ಜೈನ ಧರ್ಮದ ಅಹಿಂಸಾ ತತ್ವ , ಅಂದರೆ ಪ್ರತಿಯೊಂದು ಜೀವಿಯ ಮೇಲೂ ಹಿಂಸೆ ಮಾಡದಿರುವುದು, ಅವರ ಜೀವನದ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿತು. ಹೀಗಾಗಿ ಕಾರ್ಪೊರೇಟ್ ಬದುಕಿಗೆ ವಿದಾಯ ಹೇಳಿ ಆಧ್ಯಾತ್ಮಿಕ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
37 ವರ್ಷ IOCLನಲ್ಲಿ ಕೆಲಸ ಮಾಡಿದ ತಾಯಿ
ಅಕ್ಷಿತಾ ಅವರ ತಾಯಿ ಶಿರೋಮಣಿ ಬಜಾಜ್ ಅವರು ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL)ನಲ್ಲಿ ಬರೋಬ್ಬರಿ 37 ವರ್ಷ ಕೆಲಸ ಮಾಡಿದ್ದಾರೆ. 2025ರ ಅಕ್ಟೋಬರ್ನಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದಾರೆ. ಪತಿಯ ನಿಧನದ ಬಳಿಕ ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸಿದ ಶಿರೋಮಣಿ, ಜೈನ ಸಾಧ್ವಿಗಳ ಸಂಪರ್ಕದಿಂದ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಜೀವನದತ್ತ ಹೆಚ್ಚು ಆಕರ್ಷಿತರಾದರು. ಅಂತಿಮವಾಗಿ ಮಗಳ ಜೊತೆಯಲ್ಲೇ ಸನ್ಯಾಸ ದೀಕ್ಷೆ ಪಡೆಯಲು ನಿರ್ಧರಿಸಿದ್ದಾರೆ. ದೀಕ್ಷೆಗೆ ಸಿದ್ಧತೆ ತಾಯಿ-ಮಗಳು ಇಬ್ಬರೂ ಜೈನ ಆಧ್ಯಾತ್ಮಿಕ ಗುರು ಸಾಧ್ವಿ ಪೂರ್ಣಪ್ರಜ್ಞಾಶ್ರೀ ಅವರ ಮಾರ್ಗದರ್ಶನದಲ್ಲಿ ಇದ್ದಾರೆ. ಶಿರೋಮಣಿ ಅವರು ದೀಕ್ಷೆಗೆ ಸಿದ್ಧರಾಗುವ ನಿಟ್ಟಿನಲ್ಲಿ ಹಲವು ಧಾರ್ಮಿಕ ಆಚರಣೆಗಳು ಹಾಗೂ ಕಠಿಣ ತಪಸ್ಸುಗಳನ್ನು ಪೂರ್ಣಗೊಳಿಸಿದ್ದಾರೆ ಎನ್ನಲಾಗಿದೆ. ದೀಕ್ಷಾ ಕಾರ್ಯಕ್ರಮದ ಅಂಗವಾಗಿ ಜೋಧ್ಪುರದಲ್ಲಿ ಸಾಂಪ್ರದಾಯಿಕ ಜೈನ ಮೆರವಣಿಗೆ (ವರ್ಘೋಡಾ) ಆಯೋಜಿಸಲಾಗಿದ್ದು, ಬಳಿಕ ಫೆಬ್ರವರಿ 25ರಂದು ಚೆನ್ನೈನಲ್ಲಿ ದೀಕ್ಷಾ ಸಮಾರಂಭ ನಡೆಯಲು ನಿರ್ಧರಿಸಲಾಗಿದೆ. ಜೈನ ಧರ್ಮದಲ್ಲಿ ದೀಕ್ಷೆ ಎಂದರೆ ವ್ಯಕ್ತಿಯು ಲೌಕಿಕ ಆಸ್ತಿ, ಬಂಧನಗಳು ಹಾಗೂ ಆಸೆಗಳನ್ನು ತ್ಯಜಿಸಿ ಸಂಯಮ ಮತ್ತು ತಪಸ್ಸಿನ ಜೀವನವನ್ನು ಅಧಿಕೃತವಾಗಿ ಸ್ವೀಕರಿಸುವ ಮಹತ್ವದ ಘಟ್ಟ. ಅಕ್ಷಿತಾ ಪಾಲಿಗೆ ಈ ನಿರ್ಧಾರ ₹50 ಲಕ್ಷದ ವಾರ್ಷಿಕ ವೇತನದ ಅಂತರರಾಷ್ಟ್ರೀಯ ಕಾರ್ಪೊರೇಟ್ ವೃತ್ತಿಜೀವನಕ್ಕೆ ವಿದಾಯ ಹೇಳುವುದಾಗಿದೆ. ಅವರ ತಾಯಿಗೆ ಇದು ದಶಕಗಳ ವೃತ್ತಿ ಮತ್ತು ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸಿದ ಬಳಿಕ ಹೊಸ ಅಧ್ಯಾಯದ ಆರಂಭವಾಗಿದೆ. ವೃತ್ತಿ, ಸಂಪತ್ತು ಮತ್ತು ಲೌಕಿಕ ಜೀವನವನ್ನು ತ್ಯಜಿಸಿ ಆಧ್ಯಾತ್ಮಿಕ ಹಾದಿ ಆಯ್ದುಕೊಂಡಿರುವ ಈ ತಾಯಿ-ಮಗಳ ನಿರ್ಧಾರ ಈಗ ಗಮನ ಸೆಳೆದಿದೆ.
