ಏಳಿಂಜೆ: ದೀಪಾವಳಿ ಎಂದರೆ ಬೆಳಕಿನ ಹಬ್ಬ, ಸಂಭ್ರಮದ ಹಬ್ಬ. ಆದರೆ ಇಲ್ಲೊಬ್ಬ ಯುವಕ ತನ್ನ ವಿಭಿನ್ನ ಹಾಗೂ ಸಮಾಜಮುಖಿ ಚಿಂತನೆಯ ಮೂಲಕ ಹಬ್ಬದ ಅರ್ಥವನ್ನೇ ಬದಲಿಸಿದ್ದಾರೆ. ಧರ್ಮಗಳ ಗಡಿಯನ್ನು ಮೀರಿ ಸೌಹಾರ್ದತೆಯ ಸಂದೇಶ ಸಾರುವುದರೊಂದಿಗೆ, ಕನ್ನಡ ಶಾಲೆಯ ಮಕ್ಕಳ ಮುಖದಲ್ಲಿ ನಗು ಮೂಡಿಸಲು ಮುಂದಾಗಿದ್ದಾರೆ.



ಮೂಲತಃ ಬಾಗಲಕೋಟೆಯವರಾಗಿz್ದ್ದು, ಚಿಕ್ಕಂದಿನಿಂದಲೇ ಏಳಿಂಜೆಯಲ್ಲಿ ಬೆಳೆದಿರುವ ಅಶ್ವಾಕ್ ಕಳೆದ ಹಲವು ವರ್ಷಗಳಿಂದ ದೀಪಾವಳಿಗೆ ಮೊದಲು ಗೂಡುದೀಪಗಳನ್ನು ಮಾಡಿ ಸಂಭ್ರಮಿಸುತ್ತಿದ್ದಾರೆ. ಈ ಬಾರಿ ಅವರು ಒಂದು ಹೆಜ್ಜೆ ಮುಂದೆ ಹೋಗಿ, ತಾವೂ ಗೂಡುದೀಪ ತಯಾರಿಸುವುದಲ್ಲದೆ ತಮ್ಮ ಗೆಳೆಯರಿಗೂ ಅದನ್ನು ಕಲಿಸಿಕೊಟ್ಟಿದ್ದಾರೆ. ಗೆಳೆಯರೆಲ್ಲರೂ ಸೇರಿ ಈ ಬಾರಿ ಒಟ್ಟು 24 ಗೂಡುದೀಪಗಳನ್ನು ತಯಾರಿಸಿದ್ದಾರೆ.
ವಿಶೇಷವೆಂದರೆ, ಈ ಎಲ್ಲಾ ಗೂಡುದೀಪಗಳನ್ನು ಮಾರಾಟ ಮಾಡಿ, ಅದರಿಂದ ಬಂದ ಸಂಪೂರ್ಣ ಹಣವನ್ನು ಏಳಿಂಜೆ ಲಿಟ್ಸ್ ಫ್ಲವರ್ ಕನ್ನಡ ಮಾಧ್ಯಮ ಶಾಲೆಗೆ ದೇಣಿಗೆಯಾಗಿ ನೀಡಿದ್ದಾರೆ. ಶಾಲೆಯಲ್ಲಿ ಕೇವಲ 30 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಈ ಹಣವನ್ನು ಮಕ್ಕಳ ಶೈಕ್ಷಣಿಕ ಅಗತ್ಯಗಳಿಗೆ ಬಳಸುವಂತೆ ಅವರು ಶಾಲೆಗೆ ಮನವಿ ಮಾಡಿದ್ದಾರೆ. ಒಂದು ಗೂಡುದೀಪ ತಯಾರಿಸಲು 2-3 ದಿನಗಳು ತಗಲಲಿದ್ದು, 400 ರಿಂದ 500 ರೂ. ವೆಚ್ಚವಾಗುತ್ತದೆ ಎಂದು ಅಶ್ವಾಕ್ ತಿಳಿಸುತ್ತಾರೆ.
ಏಳಿಂಜೆಯ ಕೋಂಜಾಲಗುತ್ತು ಕೌಶಲ್ಯ ಶೆಟ್ಟಿ ಅವರ ಮನೆಯಲ್ಲಿ ಸಾಕು ಮಗನಂತಿರುವ ಅಶ್ವಾಕ್ ಅವರನ್ನು, ಕೌಶಲ್ಯ ಶೆಟ್ಟಿಯವರು ಡಿಪ್ಲೊಮಾ ಶಿಕ್ಷಣ ಕೊಡಿಸಿ ಬೆಳೆಸಿದ್ದಾರೆ. ಪ್ರಸ್ತುತ ಎಂಆರ್ಪಿಎಲ್ನಲ್ಲಿ ಉದ್ಯೋಗಿಯಾಗಿರುವ ಅಶ್ವಾಕ್, ಕೃಷಿ, ಹೈನುಗಾರಿಕೆ, ಕೋಳಿ ಸಾಕಣೆಯ ಜತೆಗೆ ಗ್ರಾಮೀಣ ಬದುಕಿನ ಸಂಸ್ಕಾರ ಹಾಗೂ ಶ್ರಮಜೀವಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಒಂದೆಡೆ ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಕಲೆಗಳು ಮರೆಯಾಗುತ್ತಿರುವಾಗ, ಮತ್ತೊಂದೆಡೆ ಅಶ್ವಾಕ್ ಮತ್ತು ಅವರ ಗೆಳೆಯರ ಬಳಗ ಗೂಡುದೀಪ ತಯಾರಿಕೆಯ ಮೂಲಕ ಕನ್ನಡ ಶಾಲೆಯ ನೆರವಿಗೆ ನಿಂತಿರುವುದು ನಿಜಕ್ಕೂ ಮಾದರಿ. ಧರ್ಮದ ಗಡಿಗಳನ್ನು ಮೀರಿ, ಹಬ್ಬದ ಸಂಭ್ರಮವನ್ನು ಬಡ ಮಕ್ಕಳ ವಿದ್ಯಾಭ್ಯಾಸದ ಬೆಳಕಾಗಿ ಪರಿವರ್ತಿಸಿರುವ ಅಶ್ವಾಕ್ ಅವರ ಈ ಸೌಹಾರ್ದಯುತ ಹೆಜ್ಜೆ ಇಡೀ ಸಮಾಜಕ್ಕೆ ಒಂದು ಸುಂದರ ಸಂದೇಶವಾಗಿದೆ.


