ವೇಣೂರು: ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮ ಪಂಚಾಯತು ವ್ಯಾಪ್ತಿಯ ಕರಿಮಣೇಲು ಗ್ರಾಮದಲ್ಲಿ ಮನೆಯೊಂದರ ಬಾವಿಗೆ ಇಂದು ಚಿರತೆ ಬಿದ್ದಿದ್ದು ಸ್ಥಳೀಯರ ಸಹಕಾರದಲ್ಲಿ ವೇಣೂರು ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ರಕ್ಷಿಸಿದ್ದಾರೆ.
ಕಾಡಿನಿಂದ ನಾಡಿಗೆ ಬಂದಿರುವ ಚಿರತೆ ಕರಿಮಣೇಲು ಗಾಂಧಿನಗರದ ಬಳ್ಳಿದಡ್ಡ ಅಶೋಕ್ ಪೂಜಾರಿಯವರ ಮನೆಯ ಕುಡಿಯುವ ನೀರಿನ ಬಾವಿಗೆ ಆಯತಪ್ಪಿ ಬಿದ್ದಿದೆ. ಅಶೋಕ್ ಪೂಜಾರಿಯವರ ಪುತ್ರ ಇಂದು ನೀರು ಸೇದಲೆಂದು ಬಾವಿ ಸನಿಹಕ್ಕೆ ಬಂದಾಗ ಬಾವಿಯಲ್ಲಿ ಚಿರತೆ ಆರ್ಭಟಿಸಿರುವುದು ಗೊತ್ತಾಗಿದೆ. ತಕ್ಷಣ ಮನೆಮಂದಿ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಸ್ಥಳೀಯರ ಸಹಕಾರ ಪಡೆದು ಚಿರತೆಗೆ ಅರಿವಳಿಕೆ ಮದ್ದು ನೀಡಿ ಸುಮಾರು ಎರಡೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಮೇಲೆತ್ತಿ ರಕ್ಷಣೆ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳ ಜೊತೆ ಸ್ಥಳೀಯರಾದ ರಮೇಶ್ ಹೆಗ್ಡೆ, ಅರವಿಂದ ಶೆಟ್ಟಿ, ನೀಲಯ್ಯ ಸೇರಿದಂತೆ ಹಲವು ಮಂದಿ ಯುವಕರು ಸಹಕಾರ ನೀಡಿದ್ದಾರೆ.





