ವೇಣೂರು: ಸಾಧನೆಯ ಛಲದೊಂದಿಗೆ ಜೀವನ ಕಟ್ಟಿಕೊಳ್ಳಲು ಹೋರಾಡುತ್ತಿದ್ದ ಮಹಿಳೆಯೊಬ್ಬರ ಬದುಕಿಗೆ ಕ್ರೋನ್ಸ್ (Crohn’s Disease) ಎಂಬ ಭೀಕರ ಕಾಯಿಲೆ ಕಂಟಕವಾಗಿ ಪರಿಣಮಿಸಿದೆ.
ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ರನ್ನಾಡಿ ನಿವಾಸಿ ರವಿ ಎಂಬವರ ಪತ್ನಿ ಶ್ರೀಮತಿ ಲೀಲಾ ಅವರು ಕಳೆದ ಏಳು ವರ್ಷಗಳಿಂದ ಈ ಮಾರಕ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸಾ ವೆಚ್ಚ ಭರಿಸಲಾಗದೆ ದಾನಿಗಳ ನೆರವು ಕೋರಿದ್ದಾರೆ.


ದುಡಿಮೆಯ ದಾರಿ ಮುಚ್ಚಿ ಆರ್ಥಿಕ ಸಂಕಷ್ಟ
ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ್ದ ಲೀಲಾ ಅವರು ಆರಂಭದಲ್ಲಿ ಫೈನಾನ್ಸ್ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ನಂತರದ ದಿನಗಳಲ್ಲಿ ಕೌಟುಂಬಿಕ ಕಾರಣಗಳಿಂದ ಕೆಲಸ ತೊರೆದು ಗಂಡನ ಜೊತೆ ಕೂಲಿ ಕೆಲಸಕ್ಕೆ ತೆರಳುತ್ತಾ ಕುಟುಂಬವನ್ನು ಸರಿದೂಗಿಸುತ್ತಿದ್ದರು. ಈ ಸಂದರ್ಭ ಸಿಡಿಲು ಬಡಿದಂತೆ ಮಹಿಳೆಗೆ ಈ ಕಾಯಿಲೆ ಕಾಣಿಸಿಕೊಂಡಿದೆ. ತೀವ್ರ ಹೊಟ್ಟೆನೋವು ಜೊತೆ ಬೇಧಿ ಕಾಣಿಸಿಕೊಂಡಿದ್ದು, ಸ್ಥಳೀಯವಾಗಿ ಎಷ್ಟೇ ಚಿಕಿತ್ಸೆ ನೀಡಿದರೂ ರೋಗ ಗುಣಮುಖವಾಗಲಿಲ್ಲ. ಬಳಿಕ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಕ್ರೋನ್ಸ್ ಕಾಯಿಲೆ ಇರುವುದು ಗೊತ್ತಾಗಿದೆ. ಕಾಯಿಲೆ ತೀವ್ರಗೊಂಡ ಹಿನ್ನೆಲೆಯಲ್ಲಿ ಈಗ ಕೆಲಸಕ್ಕೂ ಹೋಗಲಾಗದೆ ಸಂಪೂರ್ಣವಾಗಿ ಮನೆಗೆ ಸೀಮಿತವಾಗಿದ್ದರು. ಮಂಗಳೂರಿನ ಮೂರ್ನಾಲ್ಕು ಆಸ್ಪತ್ರೆಗಳಲ್ಲಿ ನಿರಂತರವಾಗಿ ದಾಖಲಾಗಿ ಚಿಕಿತ್ಸೆ ಕೊಡಿಸಲಾಗಿದ್ದು, ಈಗಾಗಲೇ ಸಾಲಮಾಡಿ ಲಕ್ಷಾಂತರ ರೂಪಾಯಿ ವಿನಿಯೋಗಿಸಿದ್ದಾರೆ. ಇವರ ಮಗಳು 8ನೇ ತರಗತಿ ಹಾಗೂ ಮಗ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ತಿಂಗಳಿಗೆ 40,000 ರೂ. ಇಂಜೆಕ್ಷನ್ ವೆಚ್ಚ
ಕಾಯಿಲೆ ಪತ್ತೆಯಾದ ಬಳಿಕ ಮಂಗಳೂರು ಹಾಗೂ ಉಜಿರೆಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಈಗಾಗಲೇ ಲಕ್ಷಾಂತರ ರೂಪಾಯಿ ವೆಚ್ಚವಾಗಿದೆ. ಕಾಯಿಲೆಯನ್ನು ನಿಯಂತ್ರಣದಲ್ಲಿಡಲು ಶ್ರೀಮತಿ ಲೀಲಾ ಅವರಿಗೆ ತಿಂಗಳಿಗೆ ಎರಡು ಬಾರಿ ವಿಶೇಷ ಇಂಜೆಕ್ಷನ್ ನೀಡಬೇಕಾಗಿದೆ. ಪ್ರತಿಯೊಂದು ಇಂಜೆಕ್ಷನ್ಗೆ 20,000 ರೂಪಾಯಿ ವೆಚ್ಚವಾಗುತ್ತಿದ್ದು, ತಿಂಗಳಿಗೆ ಕೇವಲ ಇಂಜೆಕ್ಷನ್ಗೇ 40,000 ರೂಪಾಯಿ ಅಗತ್ಯವಿದೆ. ಈಗಾಗಲೇ ಹಲವು ಮಂದಿ ದಾನಿಗಳು ಆರ್ಥಿಕ ಸಹಾಯ ಮಾಡಿದ್ದಾರೆ. ಆದರೆ ಪ್ರತೀ ತಿಂಗಳ ಚಿಕಿತ್ಸಾ ವೆಚ್ಚಕ್ಕೆ ಹಣ ಹೊಂದಾಣಿಕೆ ಆಗುತ್ತಿಲ್ಲ.
ಗಂಡ ಮತ್ತು ಸಹೋದರಿಯ ಸಣ್ಣ ಆದಾಯದಲ್ಲೇ ಇಡೀ ಕುಟುಂಬ ಜೀವನ ನಡೆಸಬೇಕಿದ್ದು, ಮಕ್ಕಳ ಶಿಕ್ಷಣ, ಮನೆ ನಿರ್ವಹಣೆ ಜೊತೆಗೆ ಈ ದುಬಾರಿ ಆಸ್ಪತ್ರೆ ವೆಚ್ಚ ಭರಿಸಲು ಸಾಧ್ಯವಾಗದೆ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ಮಹಿಳೆಯ ಬಾಳಲ್ಲಿ ಬೆಳಕು ತುಂಬಲು ದಾನಿಗಳು, ಸಂಘ ಸಂಸ್ಥೆಗಳ ಆರ್ಥಿಕ ನೆರವು ಅಗತ್ಯವಿದೆ.
ನೆರವು ನೀಡಲು ಇಚ್ಚಿಸುವ ದಾನಿಗಳು ಕರ್ನಾಟಕ ಗ್ರಾಮೀಣ ಬ್ಯಾಂಕ್ ವೇಣೂರು ಶಾಖೆ ಲೀಲಾರವರ ಉಳಿತಾಯ ಖಾತೆ ಸಂಖ್ಯೆ 89066968543 (IFSC ಕೋಡ್: PKGB0013300) (ಎಂಐಸಿಆರ್ ಕೋಡ್: 574697025) ಸಂಖ್ಯೆಗೆ ಕಳುಹಿಸಿಕೊಡಬಹುದು ಅಥವಾ ಈ ಕ್ಯೂ ಆರ್ ಕೋಡನ್ನು ಬಳಕೆ ಮಾಡಬಹುದು. ನೇರವಾಗಿ ಸಂಪರ್ಕಿಸಲು ಬಯಸುವವರು 7337622240 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಏನಿದು ಕ್ರೋನ್ಸ್ ಕಾಯಿಲೆ?
ಕ್ರೋನ್ಸ್ ಕಾಯಿಲೆ (Crohn’s Disease)) ಎಂಬುದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಒಂದು ದೀರ್ಘಕಾಲದ ಉರಿಯೂತದ ಕಾಯಿಲೆಯಾಗಿದೆ ((Inflammatory Bowel Disease – IBD. ಇದು ಜೀರ್ಣಾಂಗದ ಯಾವುದೇ ಭಾಗದಲ್ಲಿ ಬರಬಹುದಾದರೂ, ಸಾಮಾನ್ಯವಾಗಿ ಸಣ್ಣ ಕರುಳು ಮತ್ತು ದೊಡ್ಡ ಕರುಳು ಸಂಧಿಸುವ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಮುಖ್ಯ ಲಕ್ಷಣಗಳು
ಹೊಟ್ಟೆ ನೋವು ಮತ್ತು ಸೆಳೆತ: ಹೆಚ್ಚಾಗಿ ಹೊಟ್ಟೆಯ ಬಲಭಾಗದ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ದೀರ್ಘಕಾಲದ ಭೇದಿ: ಕೆಲವು ಬಾರಿಯಲ್ಲಿ ಮಲದಲ್ಲಿ ರಕ್ತ ಅಥವಾ ಲೋಳೆ ಬೀಳಬಹುದು.
ತೂಕ ಇಳಿಕೆ: ಜೀರ್ಣಾಂಗವು ಆಹಾರದಲ್ಲಿನ ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳದ ಕಾರಣ ತೂಕ ಶೀಘ್ರವಾಗಿ ಕಡಿಮೆಯಾಗುತ್ತದೆ.
ಆಯಾಸ ಮತ್ತು ನಿರಸ: ದೇಹಕ್ಕೆ ಅಗತ್ಯ ಶಕ್ತಿ ಸಿಗದ ಕಾರಣ ಸದಾ ಆಯಾಸವಿರುತ್ತದೆ.
ಹಸಿವಿನ ಕೊರತೆ ಮತ್ತು ಜ್ವರ: ಪದೇ ಪದೇ ಸಣ್ಣ ಪ್ರಮಾಣದ ಜ್ವರ ಬರುವುದು ಹಾಗೂ ಊಟ ಮಾಡಲು ಮನಸ್ಸಾಗದಿರುವುದು. ಔಷಧಗಳು ಮತ್ತು ಸರಿಯಾದ ಜೀವನಶೈಲಿಯಿಂದ ರೋಗವನ್ನು ನಿಯಂತ್ರಣದಲ್ಲಿಡಬಹುದು.



