ಕಲ್ಪತರು ನಾಡು ಅಂತಲೇ ಹೆಸರುವಾಸಿಯಾಗಿರುವ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಕೊಬ್ಬರಿ ದಾಖಲೆ ಬೆಲೆಗೆ ಮಾರಾಟವಾದ ಉದಾಹರಣೆ ಇದೆ. ಇದೀಗ ಎಲ್ಲಾ ಕಡೆಯೂ ತೆಂಗಿನ ಉಪ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಚಿಪ್ಪಿದ ದರ ಐದು ಪಟ್ಟು ಹೆಚ್ಚಳವಾಗಿರುವ ಬಗ್ಗೆ ವರದಿಯಾಗಿದೆ. ಈ ಕುರಿತ ಅಂಕಿಅಂಶಗಳ ಸಹಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.


ಒಮ್ಮೆ ಕೇವಲ ಸೌದೆಗಾಗಿ, ಉರುವಲಾಗಿ ಅಥವಾ ತ್ಯಾಜ್ಯವೆಂದು ಎಸೆಯಡಲ್ಪಡುತ್ತಿದ್ದ ತೆಂಗಿನ ಚಿಪ್ಪು ಇಂದು ಕರ್ನಾಟದ ಪಕ್ಕದ ರಾಜ್ಯ ಕೇರಳದಲ್ಲೂ ದಾಖಲೆ ಬೆಲೆಗೆ ಮಾರಾಟವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗಿರುವ ಭಾರಿ ಬೇಡಿಕೆಯಿಂದಾಗಿ ತೆಂಗಿನ ಚಿಪ್ಪಿನ ಬೆಲೆ ಸಾರ್ವಕಾಲಿಕ ದಾಖಲೆಯ ಮಟ್ಟವನ್ನು ತಲುಪಿದೆ ಎನ್ನಲಾಗಿದೆ.
ತೆಂಗು ಬೆಳೆಗಾರರ ಮುಖದಲ್ಲಿ ಹೆಚ್ಚಿದ ಸಂತಸ
ಕೆಲವು ತಿಂಗಳ ಹಿಂದೆಯಷ್ಟೇ ಕೆ.ಜಿ.ಗೆ ಕೇವಲ ₹5 ರಿಂದ 10 ರೂಪಾಯಿನಷ್ಟಿದ್ದ ತೆಂಗಿನ ಚಿಪ್ಪಿನ ಬೆಲೆ ಪ್ರಸ್ತುತ ಪ್ರಮುಖ ಮಾರುಕಟ್ಟೆಗಳಲ್ಲಿ 32ರಿಂದ 35 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಈ ಹಿಂದೆ ಇಡೀ ತೆಂಗಿನಕಾಯಿಯ ಬೆಲೆಯೇ ಕೆ.ಜಿ.ಗೆ ₹30 ರಿಂದ ₹40 ರಷ್ಟಿತ್ತು. ಆದರೆ ಇಂದು ತೆಂಗಿನಕಾಯಿಯಿಂದ ಬೇರ್ಪಡಿಸಿದ ಕೇವಲ ಚಿಪ್ಪು ಅಷ್ಟೇ ಬೆಲೆ ಬಾಳುತ್ತಿರುವುದು ವ್ಯಾಪಾರಿಗಳು, ರೈತರಿಗೆ ಭಾರಿ ಸಂತಸ ತರಿಸಿದೆ.
ತೆಂಗಿನ ಚಿಪ್ಪಿನ ಬೆಲೆ ವಿವರ
* ಕೆಜಿಗೆ ₹32 ಇದ್ದರೆ, ಕ್ವಿಂಟಾಲ್ಗೆ 3,200 ರೂಪಾಯಿ ಆಗುತ್ತದೆ.
* ಕೆಜಿಗೆ ₹35 ಇದ್ದರೆ, ಕ್ವಿಂಟಾಲ್ಗೆ 3,500 ರೂಪಾಯಿ ಆಗುತ್ತದೆ.
ತೆಂಗಿನ ಚಿಪ್ಪಿಗೆ ಬೇಡಿಕೆ ಹೆಚ್ಚಾಗಲು ಪ್ರಮುಖ ಕಾರಣ ಏನು?
ತೆಂಗಿನ ಚಿಪ್ಪನ್ನು ಹೆಚ್ಚಿನ ತಾಪಮಾನದಲ್ಲಿ ಕಾಯಿಸಿ ಉನ್ನತ ದರ್ಜೆಯ “ಆಕ್ಟಿವೇಟೆಡ್ ಕಾರ್ಬನ್” ಅನ್ನು ತಯಾರಿಸಲಾಗುತ್ತದೆ. ಜಾಗತಿಕವಾಗಿ ಈ ವಸ್ತುವಿಗೆ ಭಾರಿ ಡಿಮ್ಯಾಂಡ್ ಇದೆ. ಇನ್ನೂ ಈ ಆಕ್ಟಿವೇಟೆಡ್ ಕಾರ್ಬನ್ ಅನ್ನು ನೀರು ಶುದ್ಧೀಕರಣ, ಸಕ್ಕರೆ ಶುದ್ಧೀಕರಣ, ವಾಯು ಮಾಲಿನ್ಯ ನಿಯಂತ್ರಣ ಉಪಕರಣಗಳು, ಔಷಧೀಯ ಉತ್ಪನ್ನಗಳು, ನವೀಕರಿಸಬಹುದಾದ ಇಂಧನ ಹಾಗೂ ಸೌಂದರ್ಯವರ್ಧಕ ವಸ್ತುಗಳ ತಯಾರಿಕೆಯಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.
ಬೇರೆ-ಬೇರೆ ದೇಶಗಳಿಗೆ ರಫ್ತು
ಕೇರಳದ ಕೊಲ್ಲಂ, ಕೊಟ್ಟಾಯಂ ಮತ್ತು ಎರ್ನಾಕುಲಂ ಮುಂತಾದ ಜಿಲ್ಲೆಗಳಿಂದ ಸಣ್ಣ ಹಾಗೂ ದೊಡ್ಡ ಪ್ರಮಾಣದ ವ್ಯಾಪಾರಿಗಳು ಚಿಪ್ಪನ್ನು ಸಂಗ್ರಹಿಸಿ, ನೆರೆಯ ತಮಿಳುನಾಡು ಹಾಗೂ ಕರ್ನಾಟಕದ ಸಂಸ್ಕರಣಾ ಘಟಕಗಳಿಗೆ ಕಳುಹಿಸುತ್ತಿದ್ದಾರೆ. ಅಲ್ಲಿಂದ ಇದನ್ನು ಜಾಗತಿಕ ಮಟ್ಟದ ಪ್ರಮುಖ ದೇಶಗಳಾದ ಚೀನಾ, ತೈವಾನ್ ಹಾಗೂ ಅಮೆರಿಕದಂತಹ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸ್ಥಳೀಯ ಆರ್ಥಿಕತೆ, ಉದ್ಯಮದ ಮೇಲೆ ಪ್ರಭಾವ
ತೆಂಗಿನ ಚಿಪ್ಪಿಗೆ ಭಾರಿ ಬೆಲೆ ಬಂದಿದ್ದರಿಂದ ಸ್ಥಳೀಯವಾಗಿ ಆನ್ಲೈನ್ ಮತ್ತು ಮನೆ-ಮನೆಗೆ ತೆರಳಿ ಚಿಪ್ಪು ಸಂಗ್ರಹಿಸುವ ಸಣ್ಣ ಉದ್ಯಮ ಸೃಷ್ಟಿಯಾಗಿದೆ. ಕೇರಳದಲ್ಲಿ ಬಹುತೇಕ ಮನೆಗಳಲ್ಲಿ ನಿತ್ಯ ಬಳಸುವ ತೆಂಗಿನಕಾಯಿಯ ಚಿಪ್ಪನ್ನು ಎಸೆಯದೆ ಶೇಖರಿಸಿಟ್ಟು, ಸ್ಥಳೀಯ ಸಂಗ್ರಹಕಾರರಿಗೆ ಮಾರಾಟ ಮಾಡಿ ಹೆಚ್ಚುವರಿ ಆದಾಯ ಗಳಿಸುತ್ತಿದ್ದಾರೆ. ತೆಂಗು ಬೆಳೆಗಾರರಿಗೆ ಕೇವಲ ತೆಂಗಿನಕಾಯಿ ಮತ್ತು ಎಣ್ಣೆಯಿಂದ ಮಾತ್ರವಲ್ಲದೆ, ಚಿಪ್ಪಿನಿಂದಲೂ ಉತ್ತಮ ಲಾಭ ಸಿಗುತ್ತಿರುವುದು ಆರ್ಥಿಕ ನೆರವಾಗಿದೆ. ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ತೆಂಗಿನಕಾಯಿ (ಕೆ.ಜಿ.ಗೆ ₹80-90) ಮತ್ತು ಕೊಬ್ಬರಿ ಎಣ್ಣೆ (ಕೆ.ಜಿ.ಗೆ ₹400-500)ಬೆಲೆಗಳೂ ಗಗನಕ್ಕೇರಿವೆ ಎಂದು ತಿಳಿದುಬಂದಿದೆ.
ಇದರಿಂದ ಸಾಮಾನ್ಯ ಗ್ರಾಹಕರ ಗೃಹ ಬಜೆಟ್ ಮೇಲೆ ಪರಿಣಾಮ ಬೀರಿದ್ದರೂ, ತೆಂಗಿನ ಚಿಪ್ಪಿಗೆ ಸಿಗುತ್ತಿರುವ ಈ ‘ಚಿನ್ನದ ಬೆಲೆ’ಯು ಬೆಳೆಗಾರರು ಮತ್ತು ಸಣ್ಣ ಮಟ್ಟದ ಕೃಷಿ ಉದ್ಯಮಿಗಳಿಗೆ ಹೊಸ ಆದಾಯದ ಮೂಲವಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಕೇವಲ ತ್ಯಾಜ್ಯವೆಂದು ಪರಿಗಣಿಸಲಾಗುತ್ತಿದ್ದ ತೆಂಗಿನ ಚಿಪ್ಪಿಗೆ ಬೇಡಿಕೆ ಹೆಚ್ಚಾಗಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಹೆಚ್ಚಿದರೂ ಆಶ್ಚರ್ಯವಿಲ್ಲ ಅಂತಲೇ ಹೇಳಬಹುದಾಗಿದೆ.



