ವೇಣೂರು: ವ್ಯವಸ್ಥಿತ ಬೋಧನೆ, ಸಮರ್ಪಕ ನಿರ್ವಹಣೆ ಮತ್ತು ಗುಣಮಟ್ಟದ ಶಿಕ್ಷಣವಿದ್ದರೆ ಸರ್ಕಾರಿ ಶಾಲೆಗಳೂ ಎಂದಿಗೂ ಹಿಂದೆ ಉಳಿಯುವುದಿಲ್ಲ ಎಂಬುದನ್ನು ಈ ಶಾಲೆ ಸಾಬೀತುಪಡಿಸಿದೆ. ಪ್ರಸ್ತುತ ಈ ಶಾಲೆಯಲ್ಲಿ ಒಟ್ಟು 384 ವಿದ್ಯಾರ್ಥಿಗಳು ಒಂದೇ ಸೂರಿನಡಿ ವಿದ್ಯೆ ಕಲಿಯುತ್ತಿರುವುದು ಇಡೀ ಶಿಕ್ಷಣ ವಲಯವೇ ತಿರುಗಿ ನೋಡುವಂತಹ ಅಪೂರ್ವ ಸಾಧನೆಯಾಗಿದೆ, ಅಂತಹ ಸರಕಾರಿ ಶಾಲೆಯ ಯಶೋಗಾಥೆ ಇಲ್ಲಿದೆ.


ಖಾಸಗಿ ಶಿಕ್ಷಣ ಸಂಸ್ಥೆಗಳ ಆರ್ಭಟದ ನಡುವೆಯೂ ಸರ್ಕಾರಿ ಶಾಲೆಗಳ ಮೇಲಿನ ವಿಶ್ವಾಸ ದಿನೇ ದಿನೇ ಕ್ಷೀಣಿಸುತ್ತಿದೆ ಎಂಬ ಅಭಿಪ್ರಾಯವಿದೆ. ಆದರೆ ಇದಕ್ಕೆ ತದ್ವಿರುದ್ಧವೆಂಬಂತೆ ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾ.ಪಂ. ವ್ಯಾಪ್ತಿಯ ಬಜಿರೆ ಪಿಎಂಶ್ರೀ ಕೆಪಿಎಸ್ ಶಾಲೆಯು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸುತ್ತಿದೆ.
ಪೂರ್ವಪ್ರಾಥಮಿಕ ಶಿಕ್ಷಣಕ್ಕೆ ಮುಂಗಡವೇ ಭರ್ತಿ!
ಕಳೆದ ಮೂರು ವರ್ಷಗಳ ಹಿಂದೆ ಈ ಶಾಲೆಯಲ್ಲಿ ಆರಂಭವಾದ ಪೂರ್ವ ಪ್ರಾಥಮಿಕ (ಎಲ್ಕೆಜಿ ಮತ್ತು ಯುಕೆಜಿ) ತರಗತಿಗಳು ಇಂದು ಕೇವಲ ಆರಂಭಿಕ ಹಂತದಲ್ಲಿಲ್ಲ; ಬದಲಿಗೆ ಪೋಷಕರ ಅಚ್ಚಮೆಚ್ಚಿನ ಆಯ್ಕೆಯಾಗಿ ಬೆಳೆದು ನಿಂತಿವೆ. ಪ್ರಸ್ತುತ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿರುವ ಈ ಶಾಲೆಯಲ್ಲಿ, ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲೂ ಸೀಟುಗಳು ಮುಂಗಡವಾಗಿಯೇ ಭರ್ತಿಯಾಗುತ್ತಿರುವುದು ಇದರ ಶೈಕ್ಷಣಿಕ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಬಾರಿಯೂ (ನಾಲ್ಕನೇ ವರ್ಷ) ಎಲ್ಕೆಜಿ ಹಾಗೂ ಯುಕೆಜಿ ತರಗತಿಗಳಲ್ಲಿ ಒಟ್ಟು 76 ಮಂದಿ ಮಕ್ಕಳು ಉತ್ಸಾಹದಿಂದ ದಾಖಲಾತಿ ಪಡೆದುಕೊಂಡಿದ್ದು, ಸರ್ಕಾರಿ ಶಾಲೆಗಳಲ್ಲಿಯೂ ಇಂಗ್ಲಿಷ್ ಮಾಧ್ಯಮ ಹಾಗೂ ಮಗುವಿಗೆ ಪೂರಕವಾದ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅತ್ಯುತ್ತಮವಾಗಿ ನೀಡಬಹುದು ಎಂಬುದನ್ನು ಈ ಶಾಲೆ ಸಾಬೀತುಪಡಿಸಿದೆ.
ಚಿಕ್ಕ ಮಕ್ಕಳಿಗೆ ಪಾಠ ಮಾಡುವುದು ಎಂದರೆ ಕೇವಲ ಪುಸ್ತಕದ ಜ್ಞಾನವನ್ನು ಧಾರೆ ಎರೆಯುವುದಲ್ಲ, ಬದಲಿಗೆ ಅವರ ಎಳೆಯ ಮನಸ್ಸಿನಲ್ಲಿ ಕುತೂಹಲ, ಸೃಜನಶೀಲತೆ ಮತ್ತು ಕಲಿಕೆಯ ಬಗ್ಗೆ ಆಸಕ್ತಿಯನ್ನು ಮೂಡಿಸುವ ಸುಂದರ ಕಲೆ. ಮಕ್ಕಳ ಲೋಕವೇ ವಿಭಿನ್ನವಾದದ್ದು; ಅಲ್ಲಿ ಕಲ್ಪನೆ, ಆಟ, ಬಣ್ಣಗಳು ಮತ್ತು ಪ್ರೀತಿಯದ್ದೇ ಸಾಮ್ರಾಜ್ಯ. ಹೀಗಾಗಿ, ಅವರ ಜಗತ್ತಿಗೆ ತಕ್ಕಂತೆ ಬೋಧನಾ ವಿಧಾನವನ್ನು ರೂಪಿಸಿಕೊಳ್ಳುವುದು ಅತ್ಯಗತ್ಯ. ಅಂತಹ ನೈಪುಣ್ಯತೆ ಹೊಂದಿರುವ ಶಿಕ್ಷಕಿಯರು ಬಜಿರೆ ಶಾಲೆಯಲ್ಲಿದ್ದಾರೆ.
ಬೋಧನಾ ವಿಧಾನ
ಆಟದ ಮೂಲಕ ಕಲಿಕೆ
ಇಲ್ಲಿ ಹೆಚ್ಚಾಗಿ ಆಟದ ಮೂಲಕವೇ ಪಾಠವನ್ನು ಬೋಧಿಸಲಾಗುತ್ತಿದೆ. ಮಕ್ಕಳು ಆಟವಾಡುತ್ತಲೇ ಹೆಚ್ಚು ಕಲಿಯುತ್ತಾರೆ. ಹಾಡುಗಳು, ಅಭಿನಯ, ಮತ್ತು ಒಗಟುಗಳ ಮೂಲಕ ಪಾಠ ಮಾಡಿದರೆ ಅವರು ಬೇಸರಗೊಳ್ಳದೆ ಉತ್ಸಾಹದಿಂದ ಭಾಗವಹಿಸುತ್ತಾರೆನ್ನುವುದು ಶಿಕ್ಷಕಿ ಸವಿತಾ ಅವರ ಅಭಿಪ್ರಾಯ.
ಭಯಮುಕ್ತವಾದ ಹಾಗೂ ಪ್ರೀತಿಯಿಂದ ಕೂಡಿದ ತರಗತಿಯ ವಾತಾವರಣವು ಮಕ್ಕಳ ಕಲಿಕಾ ಸಾಮರ್ಥ್ಯವನ್ನು ನೂರರಷ್ಟು ಹೆಚ್ಚಿಸುತ್ತದೆ ಅನ್ನುವುದಕ್ಕೆ ಬಜಿರೆ ಪೂರ್ವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಸಾಕ್ಷಿ.
ಎಲ್ಕೆಜಿ ಯುಕೆಜಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ
ಸರ್ಕಾರಿ ಶಾಲೆಗಳು ಮತ್ತು ಅಂಗನವಾಡಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಕೆಜಿ ಮತ್ತು ಯುಕೆಜಿ ಮಕ್ಕಳ ಪೌಷ್ಟಿಕಾಂಶದ ಕೊರತೆ ನೀಗಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮಹತ್ವದ ಹೆಜ್ಜೆ ಇಟ್ಟಿದೆ. ಇದುವರೆಗೆ 1 ರಿಂದ10ನೇ ತರಗತಿ ಮಕ್ಕಳಿಗೆ ಸೀಮಿತವಾಗಿದ್ದ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನ ಈ ಪೂರ್ವ ಪ್ರಾಥಮಿಕ ಮಕ್ಕಳಿಗೂ ವಿಸ್ತರಿಸಲಾಗುತ್ತಿದೆ. ಪಿಎಂ-ಪೋಷಣ್ ಯೋಜನೆಯಡಿ ಬಿಸಿಯೂಟದ ಜೊತೆಗೆ ಕ್ಷೀರಭಾಗ್ಯ ಯೋಜನೆಯಡಿ ಹಾಲು, ಮೊಟ್ಟೆ ಅಥವಾ ಬಾಳೆಹಣ್ಣು ನೀಡಲಾಗುತ್ತಿದೆ. ಬಿಸಿಯೂಟದ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ೬೦:೪೦ ಅನುಪಾತದಲ್ಲಿ ಭರಿಸುತ್ತಿದ್ದು, ಹಾಲು ಮತ್ತು ಮೊಟ್ಟೆಯ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ.
ಪೋಷಕರಿಗೆ ನೆಮ್ಮದಿ
ಇಂಗ್ಲೀಷ್ ಕಲಿಕೆಯ ಆಸೆಯಿಂದ ಖಾಸಗಿ ಶಾಲೆಗಳಿಗೆ ಸಾಲ ಮಾಡಿ ಮಕ್ಕಳನ್ನು ಸೇರಿಸುತ್ತಿದ್ದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸರ್ಕಾರದ ಈ ಯೋಜನೆ ದೊಡ್ಡ ಮಟ್ಟದ ಆರ್ಥಿಕ ನೆಮ್ಮದಿ ನೀಡಿದೆ. ಪ್ರಸ್ತುತ ಬಜಿರೆ ಶಾಲೆಯಲ್ಲಿ ಎಲ್ಕೆಜಿ-ಯುಕೆಜಿ ತರಗತಿಗಳಿಗೆ ಖಾಯಂ ಶಿಕ್ಷಕರ ನೇಮಕಾತಿ ಇಲ್ಲದಿದ್ದರೂ ಅತಿಥಿ ಶಿಕ್ಷಕರನ್ನ ನೇಮಿಸಿಕೊಂಡು ಬೋಧನೆ ನಡೆಸಲಾಗುತ್ತಿದೆ. ಪದವೀಧರ ಕಾರ್ಯಕರ್ತೆಯರೇ ಮಕ್ಕಳಿಗೆ ಆಟದ ಮೂಲಕ ಪಾಠ ಹೇಳಿಕೊಡುತ್ತಿದ್ದಾರೆ.
ಖಾಸಗಿ ಶಾಲೆಗಳ ವ್ಯಾಮೋಹದಲ್ಲಿ ಸರ್ಕಾರಿ ಶಾಲೆಗಳನ್ನು ಕಡೆಗಣಿಸುವ ಇಂದಿನ ದಿನಗಳಲ್ಲಿ, ಬಜರೆ ಪಿಎಂಶ್ರೀ ಕೆಪಿಎಸ್ ಶಾಲೆಯ ಈ ಯಶಸ್ಸು ಇಡೀ ಶಿಕ್ಷಣ ಕ್ಷೇತ್ರಕ್ಕೆ ಹೊಸ ದಿಕ್ಸೂಚಿಯಾಗಿದೆ. ನುರಿತ ಶಿಕ್ಷಕರ ಮಾರ್ಗದರ್ಶನ, ಆಕರ್ಷಕ ಕಲಿಕಾ ವಾತಾವರಣ ಮತ್ತು ಪೋಷಕರ ಅಚಲ ವಿಶ್ವಾಸವಿದ್ದರೆ ಸರ್ಕಾರಿ ಶಾಲೆಗಳೂ ಖಾಸಗಿ ಶಾಲೆಗಳಿಗಿಂತ ಮಿಗಿಲಾಗಿ ಬೆಳೆಯಬಲ್ಲವು ಎಂಬುದನ್ನು ಈ ಶಾಲೆ ಸಾಬೀತುಪಡಿಸಿದೆ. ಪೂರ್ವಪ್ರಾಥಮಿಕ ಶಿಕ್ಷಣದಿಂದ ೮ನೇ ತರಗತಿವರೆಗೆ ಪ್ರಸಕ್ತ ಸಾಲಿನಲ್ಲಿ ಒಟ್ಟು 384 ವಿದ್ಯಾರ್ಥಿಗಳಿದ್ದು, ಕಂದಮ್ಮಗಳ ಮುಖದಲ್ಲಿ ಅರಳಿರುವ ಮಂದಹಾಸವೇ ಈ ಶಾಲೆಯ ಯಶಸ್ಸಿಗೆ ಅತಿ ದೊಡ್ಡ ಮುಕುಟವಾಗಿದೆ.
ಅಚಲ ವಿಶ್ವಾಸದ ಸಂಕೇತ
ನಮ್ಮ ಬಜಿರೆ ಪಿಯಂಶ್ರೀ ಕೆಪಿಎಸ್ ಶಾಲೆಯಲ್ಲಿ ಪೂರ್ವಪ್ರಾಥಮಿಕ ಶಿಕ್ಷಣದಿಂದ 8ನೇ ತರಗತಿವರೆಗೆ 384 ವಿದ್ಯಾರ್ಥಿಗಳು ವಿದ್ಯಾರ್ಜನೆ ಪಡೆಯುತ್ತಿದ್ದಾರೆ. ಇದು ಕೇವಲ ಮಕ್ಕಳ ಸಂಖ್ಯೆಯಲ್ಲ, ಬದಲಿಗೆ ಆ ಊರಿನ ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಸರ್ಕಾರಿ ಶಾಲೆಯ ಮೇಲೆ ಇಟ್ಟಿರುವ ಅಚಲ ವಿಶ್ವಾಸದ ಸಂಕೇತ.
ಶ್ರೀಮತಿ ರಶ್ಮಿ ಶೆಟ್ಟಿ, ಮುಖ್ಯ ಶಿಕ್ಷಕಿ (ಪ್ರಭಾರ)



