ರಾಜ್ಯಾದ್ಯಂತ ಪಡಿತರ ಚೀಟಿದಾರರ ಇ-ಕೆವೈಸಿ ಪ್ರಕ್ರಿಯೆ ಜೋರಾಗಿ ನಡೆಯುತ್ತಿದೆ. ಈ ನಡುವೆಯೇ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಸಾರ್ವಜನಿಕರಿಗೆ ಅತ್ಯಂತ ಮಹತ್ವದ ಮಾಹಿತಿ ರವಾನೆ ಮಾಡಿದೆ.


ಕೇಂದ್ರ ಸರ್ಕಾರದ ‘ಮೇರಾ ರೇಷನ್’ (Mera Ration) ಅಥವಾ ‘Mera eKYC’ ಮೊಬೈಲ್ ಆ್ಯಪ್ಗಳ ಮೂಲಕ ಮನೆಯಲ್ಲೇ ಕುಳಿತು ಸ್ವತಃ ಮಾಡಿಕೊಳ್ಳುವ ಇ-ಕೆವೈಸಿ ರಾಜ್ಯ ಆಹಾರ ಇಲಾಖೆಯ ಸರ್ವರ್ನಲ್ಲಿ ಅಧಿಕೃತವಾಗಿ ಮಾನ್ಯವಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಸುಳ್ಳು ಮಾಹಿತಿಗೆ ಮರುಳಾಗದಂತೆ ಮನವಿ
ಸಾಮಾಜಿಕ ಜಾಲತಾಣಗಳು ಹಾಗೂ ಯೂಟ್ಯೂಬ್ಗಳಲ್ಲಿ ಹರಿದಾಡುತ್ತಿರುವ ಸುಳ್ಳು ವಿಡಿಯೋಗಳನ್ನು ನಂಬಿ ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬಾರದು. ‘ಮೇರಾ ರೇಷನ್ ಆ್ಯಪ್ ಮೂಲಕ ಮಾಡುವ ಕೆವೈಸಿ ರಾಜ್ಯದ ವ್ಯವಸ್ಥೆಯಲ್ಲಿ ಮಾನ್ಯವಾಗಿಲ್ಲ. ಪಡಿತರದಾರರು ಕಡ್ಡಾಯವಾಗಿ ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ತೆರಳಿಯೇ ಇ-ಕೆವೈಸಿ ಪೂರ್ಣಗೊಳಿಸಬೇಕು ಎಂದು ಆಹಾರ ಇಲಾಖೆಯ ಉಪ ನಿರ್ದೇಶಕ ಕೆ.ಪಿ.ಮಧುಸೂದನ್ ಅವರು ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಆ್ಯಪ್ಗಳ ಇ-ಕೆವೈಸಿ ಏಕೆ ಮಾನ್ಯವಲ್ಲ?
ನ್ಯಾಯಬೆಲೆ ಅಂಗಡಿಗಳ ಮುಂದೆ ನಿಲ್ಲುವ ಕ್ಯೂ ಹಾಗೂ ಸರ್ವರ್ ಸಮಸ್ಯೆಯಿಂದ ಪಾರಾಗಲು ಹಲವು ನಾಗರಿಕರು ಮೊಬೈಲ್ ಆ್ಯಪ್ಗಳ ಮೂಲಕ ‘ಫೇಸ್ ಅಥೆಂಟಿಕೇಷನ್’ (ಮುಖ ಗುರುತಿಸುವಿಕೆ) ಬಳಸಿ ಇ-ಕೆವೈಸಿ ಮಾಡಿಕೊಳ್ಳುತ್ತಿದ್ದರು. ಈ ಮಾಹಿತಿಯು ಕೇಂದ್ರದ ಸಾಮಾನ್ಯ ಪೋರ್ಟಲ್ನಲ್ಲಿ ದಾಖಲಾದರೂ, ಕರ್ನಾಟಕ ರಾಜ್ಯ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ (ahara.karnataka.gov.in) ತಾಂತ್ರಿಕವಾಗಿ ಜೋಡಣೆಯಾಗಿಲ್ಲ. ಆದ್ದರಿಂದ ರಾಜ್ಯದ ತಂತ್ರಾಂಶದಲ್ಲಿ ಪರಿಶೀಲಿಸಿದಾಗ ಅಂತಹ ಸದಸ್ಯರ ಇ-ಕೆವೈಸಿ ಇನ್ನೂ ಬಾಕಿ ಎಂದೇ ತೋರಿಸುತ್ತಿದೆ.
* ಪಡಿತರ ಚೀಟಿದಾರರು ತಮ್ಮ ಪಡಿತರ ಅಂಗಡಿಗೆ ಖುದ್ದಾಗಿ ಭೇಟಿ ನೀಡಿ, ಇ-ಪಿಒಎಸ್ ಯಂತ್ರದಲ್ಲಿ ಬೆರಳಚ್ಚು ಅಥವಾ ಕಣ್ಣಿನ ಪಾಪೆ ಸ್ಕ್ಯಾನ್ (Iris Scan) ನೀಡುವ ಮೂಲಕವೇ ಇ-ಕೆವೈಸಿ ಮಾಡಿಸಬೇಕು.
* ರೇಷನ್ ಕಾರ್ಡ್ನಲ್ಲಿ ಹೆಸರಿರುವ ಪ್ರತಿಯೊಬ್ಬ ಸದಸ್ಯರೂ ಇ-ಕೆವೈಸಿ ಮಾಡಿಸುವುದು ಕಡ್ಡಾಯ. ಇಲ್ಲದಿದ್ದರೆ ಅಂತಹ ಸದಸ್ಯರ ಹೆಸರು ಪಡಿತರ ಚೀಟಿಯಿಂದ ರದ್ದಾಗುವ ಸಾಧ್ಯತೆಯಿದೆ.
ಸಾರ್ವಜನಿಕರಿಗೆ ಮಹತ್ವದ ಸಲಹೆಗಳು
* ನ್ಯಾಯಬೆಲೆ ಅಂಗಡಿಗಳಲ್ಲಿನ ದಟ್ಟಣೆ ತಪ್ಪಿಸಲು ಆಹಾರ ಇಲಾಖೆಯೇ ಪ್ರತ್ಯೇಕ ಆಂಡ್ರಾಯ್ಡ್ ಆ್ಯಪ್ ಅಭಿವೃದ್ಧಿಪಡಿಸುತ್ತಿದ್ದು, ಅದು ಅಧಿಕೃತವಾಗಿ ಬಿಡುಗಡೆ ಆಗುವವರೆಗೆ ಯಾವುದೇ ಥರ್ಡ್ ಪಾರ್ಟಿ ಆ್ಯಪ್ಗಳನ್ನು ಬಳಸಬೇಡಿ.
* ಇ-ಕೆವೈಸಿ ಪ್ರಕ್ರಿಯೆಯನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಸಂಪೂರ್ಣ ಉಚಿತವಾಗಿ ಮಾಡಲಾಗುತ್ತದೆ. ಆನ್ಲೈನ್ ಕೇಂದ್ರಗಳಿಗೆ ಅಥವಾ ಮೂರನೇ ವ್ಯಕ್ತಿಗಳಿಗೆ ಹಣ ನೀಡುವ ಅಗತ್ಯವಿಲ್ಲ.
* ಅಪರಿಚಿತ ಆ್ಯಪ್ಗಳು ಅಥವಾ ವ್ಯಕ್ತಿಗಳೊಂದಿಗೆ ನಿಮ್ಮ ಆಧಾರ್ ಸಂಖ್ಯೆ ಮತ್ತು ಒಟಿಪಿ ಹಂಚಿಕೊಳ್ಳುವುದು ಸೈಬರ್ ಅಪರಾಧಕ್ಕೆ ದಾರಿ ಮಾಡಿಕೊಡಬಹುದು.
ಕಾರ್ಡ್ ಇ-ಕೆವೈಸಿ ಆಗಿದೆಯೇ ಎಂದು ತಿಳಿಯುವುದೇಗೆ?
* ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ahara.karnataka.gov.in.ಗೆ ಭೇಟಿ ನೀಡಿ
* ಮುಖಪುಟದಲ್ಲಿ ಇ-ಸೇವೆಗಳು ವಿಭಾಗಕ್ಕೆ ತೆರಳಿ.
* ‘e-Status’ ಆಯ್ಕೆಯಲ್ಲಿ ನಿಮ್ಮ ಪಡಿತರ ಚೀಟಿ ಸಂಖ್ಯೆ ನಮೂದಿಸಿ.
* ಕುಟುಂಬದ ಸದಸ್ಯರ ಹೆಸರುಗಳ ಮುಂದೆ ಇ-ಕೆವೈಸಿ ಸ್ಥಿತಿ ‘Done ಅಥವಾ Completed’ ಎಂದು ತೋರಿಸಿದರೆ ಮಾತ್ರ ಪ್ರಕ್ರಿಯೆ ಯಶಸ್ವಿಯಾಗಿದೆ ಎಂಬುದು ಕನ್ಫರ್ಮ್ ಆಗಲಿದೆ.



