ಮಂಗಳೂರು, ಆ. 8: ತನ್ನ ಸೌಂದರ್ಯ ಮತ್ತು ಪ್ರಶಾಂತತೆಗೆ ಹೆಸರುವಾಸಿಯಾಗಿರುವ ಸಮುದ್ರ ಇದೀಗ ಟನ್ಗಟ್ಟಲೆ ತ್ಯಾಜ್ಯವನ್ನು ದಡಕ್ಕೆ ತಂದು ಹಾಕುತ್ತಿದ್ದು, ಬೆಂಗ್ರೆ ಬೀಚ್ನ ಎಂಡ್ಪಾಯಿಂಟ್ ಕಸದ ರಾಶಿಯಿಂದ ಆವೃತವಾಗಿದೆ. ಇದರಿಂದ ಪರಿಸರದ ಬಗ್ಗೆ ಗಂಭೀರ ಕಳವಳ ವ್ಯಕ್ತವಾಗಿದೆ.


ಮನಮೋಹಕ ನೋಟಗಳಿಗೆ ಹೆಸರುವಾಸಿಯಾಗಿರುವ ಬೀಚ್ನ ಎಂಡ್ಪಾಯಿಂಟ್ನಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಕ್ಯಾರಿ ಬ್ಯಾಗ್ಗಳು, ಆಹಾರದ ಪ್ಯಾಕೆಟ್ಗಳು, ಹೂವಿನ ನಿರ್ಮಾಲ್ಯ ಹಾಗೂ ಅಲೆಗಳೊಂದಿಗೆ ದಡಕ್ಕೆ ತೇಲಿಬಂದಿರುವ ಇತರೆ ತ್ಯಾಜ್ಯಗಳು ಎಲ್ಲೆಂದರಲ್ಲಿ ಕಂಡುಬರುತ್ತಿವೆ. ಕಸದ ರಾಶಿಯಿಂದ ಕರಾವಳಿಯ ಸೌಂದರ್ಯಕ್ಕೆ ಧಕ್ಕೆಯಾಗಿದ್ದು, ನಗರದ ಪ್ರಮುಖ ಸುಂದರ ತಾಣಗಳಲ್ಲೊಂದಾಗಿರುವ ಈ ಪ್ರದೇಶ ಅಸಹತ್ಯಕರವಾಗಿ ಕಾಣುತ್ತಿದೆ.ಬೀಚ್ನ ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆಯಾಗುವುದರ ಜೊತೆಗೆ, ತೇಲಿಬರುವ ತ್ಯಾಜ್ಯವು ಸಮುದ್ರ ಜೀವಿಗಳು ಹಾಗೂ ಕರಾವಳಿ ಪರಿಸರ ವ್ಯವಸ್ಥೆಗೂ ಅಪಾಯವನ್ನುಂಟುಮಾಡುತ್ತಿದೆ. ಪ್ಲಾಸ್ಟಿಕ್ ಸೇರಿದಂತೆ ಜೈವಿಕವಾಗಿ ಕೊಳೆಯದ ವಸ್ತುಗಳು ತೀರದಲ್ಲಿ ನಿರಂತರವಾಗಿ ಸಂಗ್ರಹವಾಗುತ್ತಿದ್ದು, ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದೆ.ಹೆಚ್ಚುತ್ತಿರುವ ತ್ಯಾಜ್ಯದ ಪ್ರಮಾಣವು ನಿಯಮಿತ ಸ್ವಚ್ಛತಾ ಕಾರ್ಯ ಹಾಗೂ ಕರಾವಳಿ ತ್ಯಾಜ್ಯ ನಿರ್ವಹಣೆಯ ಅಗತ್ಯವನ್ನು ಎತ್ತಿತೋರಿಸುತ್ತದೆ. ಸಂಗ್ರಹವಾಗಿರುವ ಕಸವನ್ನು ತ್ವರಿತವಾಗಿ ತೆರವುಗೊಳಿಸುವುದು ಹಾಗೂ ಕರಾವಳಿ ಪ್ರದೇಶದ ಮೇಲೆ ನಿರಂತರ ನಿಗಾ ವಹಿಸುವುದು ಪರಿಸರದ ಮತ್ತಷ್ಟು ಹಾನಿಯನ್ನು ತಡೆಯಲು ಮತ್ತು ಬೀಚ್ನ ಸ್ವಚ್ಛತೆಯನ್ನು ಕಾಪಾಡಲು ಅಗತ್ಯವಾಗಿದೆ.ಬೆಂಗ್ರೆ ಬೀಚ್ಗೆ ವರ್ಷಪೂರ್ತಿ ಪ್ರವಾಸಿಗರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ಸ್ವಚ್ಛ ಹಾಗೂ ಮಾಲಿನ್ಯಮುಕ್ತ ಕರಾವಳಿಯನ್ನು ಖಚಿತಪಡಿಸುವುದು ಅಗತ್ಯವಾಗಿದೆ. ಮಂಗಳೂರಿನ ಜನಪ್ರಿಯ ಪ್ರವಾಸಿ ತಾಣಗಳಲ್ಲೊಂದಾಗಿರುವ ಈ ಪ್ರದೇಶದ ನೈಸರ್ಗಿಕ ಸೌಂದರ್ಯ ಹಾಗೂ ಕರಾವಳಿ ಪರಿಸರವನ್ನು ಸಂರಕ್ಷಿಸಲು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸುವುದು ಅಗತ್ಯವಾಗಿದೆ.



