ಬೆಂಗಳೂರು, ಜು. 21: ಆರ್ಎಸ್ಎಸ್ ನೋಂದಣಿಗೆ ಪಟ್ಟು ಹಿಡಿದಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಕೋರ್ಟ್ ಮತ್ತೊಮ್ಮೆ ಸಮನ್ಸ್ ನೀಡಿದೆ. ಆರ್ಎಸ್ಎಸ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪ ಮೇಲೆ ಬೆಂಗಳೂರಿನ ಸಿದ್ದಾಪುರದ ತೇಜಸ್ ಗೌಡ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಿಯಾಂಕ್ ಖರ್ಗೆ ಹಾಗೂ ಮೊಹಮ್ಮದ್ ನಲಪಾಡ್ಗೆ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದ್ದು, ಆಗಸ್ಟ್ 1ರಂದು ಖುದ್ದಾಗಿ ಹಾಜರಾಗುವಂತೆ ಆದೇಶ ಹೊರಡಿಸಿದೆ.

ಆರ್ಎಸ್ಎಸ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆಂದು ಆರೋಪಿಸಿ ಎ.ತೇಜಸ್ ಎಂಬುವರು ಪ್ರಿಯಾಂಕ್ ಖರ್ಗೆ ಹಾಗೂ ಮೊಹಮ್ಮದ್ ನಲಪಾಡ್ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ಈ ಹಿಂದೆಯೂ ಸಹ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಆದ್ರೆ, ಈ ಹಿಂದೆ ನೀಡಿದ್ದ ಸಮನ್ಸ್ ಜಾರಿಗೆ ಪೊಲೀಸರು ವಿಫಲರಾಗಿದ್ದರು. ಹೀಗಾಗಿ ಮತ್ತೊಮ್ಮೆ ಕೋರ್ಟ್, ಸಮನ್ಸ್ ಜಾರಿ ಮಾಡಿದೆ.
ಆಗಸ್ಟ್ 1ರಂದು ಖುದ್ದಾಗಿ ಹಾಜರಾಗಲು ಆದೇಶ
ಬೆಂಗಳೂರಿನ 42ನೇ ಎಸಿಜೆಎಂ (ACJM) ಕೋರ್ಟ್ ಈ ಆದೇಶ ನೀಡಿದ್ದು, ಆಗಸ್ಟ್ 1ರಂದು ಸಚಿವ ಪ್ರಿಯಾಂಕ್ ಖರ್ಗೆ (A1) ಮತ್ತು ಮೊಹಮ್ಮದ್ ನಲಪಾಡ್ (A3) ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ. ನ್ಯಾಯಾಧೀಶರಾದ ಸಂದೀಪ್ ಪಾಟೀಲ್ ಅವರು ಈ ಸಮನ್ಸ್ ಜಾರಿಗೊಳಿಸಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಸಚಿವ ಪ್ರಿಯಾಂಕ್ ಖರ್ಗೆ ಅವರು 2025ರ ಅ.14ರಂದು ಆರ್ಎಸ್ಎಸ್ ಸದಸ್ಯರ ವಿರುದ್ಧ ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದರು ಎಂಬ ಆರೋಪವಿದೆ. ಇನ್ನು ಮೊಹಮ್ಮದ್ ನಲಪಾಡ್ ಅವರು ಯೂಟ್ಯೂಬ್ ಚಾನೆಲ್ ಒಂದರಲ್ಲಿ ಸಂಘದ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು ಎಂದು ದೂರಲಾಗಿತ್ತು. ಈ ಹೇಳಿಕೆಗಳು ಮತ್ತು ಸಾಮಾಜಿಕ ಜಾಲತಾಣಗಳ ಪೋಸ್ಟ್ಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ಘನತೆಗೆ ಧಕ್ಕೆ ತಂದಿವೆ ಎಂದು ಬೆಂಗಳೂರಿನ ಸಿದ್ದಾಪುರದ ನಿವಾಸಿ ಎ. ತೇಜಸ್ ಗೌಡ ಅವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯವು ಈಗ ಖುದ್ದು ವಿಚಾರಣೆಗೆ ಹಾಜರಾಗಲು ಆಗಸ್ಟ್ 1ರಂದು ಗಡುವು ನೀಡಿದೆ.



