ನವದೆಹಲಿ: ಅಯೋಧ್ಯೆಯ ರಾಮ ಮಂದಿರದ ಖರ್ಚು-ವೆಚ್ಚದ ನಿರ್ವಹಣೆಗೆ ಸಂಬಂಧಿಸಿದಂತೆ ಪೂರ್ಣ ವಿವರ ನೀಡುವಂತೆ ಕಾನೂನು ನೋಟಿಸ್ ಜಾರಿಗೊಳಿಸಿರುವುದಾಗಿ ವರದಿಯಾಗಿದೆ.
ಗುರುವಾರ (ಜೂ.18) ಬಿಹಾರದ ಆರ್ಜೆಡಿ ಸಂಸದ ಸುಧಾಕರ್ ಸಿಂಗ್ ಅವರು ಸುಪ್ರೀಂ ಕೋರ್ಟ್ ವಕೀಲ ಸತ್ಯಂ ಸಿಂಗ್ ರಜಪೂತ್ ಮೂಲಕ ದೇವಾಲಯ ಆಡಳಿತ ಮಂಡಳಿಗೆ ಲೀಗಲ್ ನೋಟಿಸ್ ನೀಡಿದ್ದು, ಕಳೆದ ಐದು ಹಣಕಾಸು ವರ್ಷಗಳಲ್ಲಿ ಎಲ್ಲಾ ದೇಣಿಗೆ ಮತ್ತು ವೆಚ್ಚಗಳ ಬಗ್ಗೆ ಸಂಪೂರ್ಣ ವಿವರ ಬಹಿರಂಗಗೊಳಿಸುವಂತೆ ಒತ್ತಾಯಿಸಿರುವುದಾಗಿ ವರದಿ ತಿಳಿಸಿದೆ.
ಅಯೋಧ್ಯೆ ರಾಮಮಂದಿರ ಸಮಿತಿಯ ಟ್ರಸ್ಟ್ ಅಧ್ಯಕ್ಷ ಮಹಾಂತ್ ಗೋಪಾಲ್ ದಾಸ್, ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ವರದಿ ಹೇಳಿದೆ.
7 ಕೋಟಿ ರೂ . ಕಳವು?
ಅಯೋಧ್ಯೆಯ ಮಾಜಿ ಎಸ್ಪಿ ಶಾಸಕ ಪವನ್ ಪಾಂಡೆ ಅವರು ಮಾಡಿದ ಆರೋಪದ ನಂತರ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಅಯೋಧ್ಯೆ ದೇವಸ್ಥಾನದ ಆಡಳಿತ ಮಂಡಳಿಯು ದೇವಾಲಯದ ಸಂಗ್ರಹ ಕೊಠಡಿಗಳಿಂದ ₹ 7 ರಿಂದ 7.5 ಕೋಟಿ ರೂಪಾಯಿ ದೇಣಿಗೆಯನ್ನು ಕಳ್ಳತನ ಮಾಡಿದೆ ಎಂದು ಆರೋಪಿಸಿದ್ದರು.
ಆದರೆ ಟ್ರಸ್ಟ್ ನ ಪ್ರಧಾನ ಕಾರ್ಯದರ್ಸಿ ಚಂಪತ್ ರಾಯ್, ಈ ಎಲ್ಲಾ ಆರೋಪಗಳು ಆಧಾರರಹಿತ ಎಂದು ತಳ್ಳಿಹಾಕಿದ್ದಾರೆ. ಈ ವಿಚಾರದಲ್ಲಿ ಎಲ್ಲಾ ವಿಪಕ್ಷಗಳು ಮುಗಿಬೀಳಲು ಮುಂದಾಗಿರುವುದಾಗಿ ತಿರುಗೇಟು ನೀಡಿದ್ದರು.
ಈ ಎಲ್ಲಾ ಆರೋಪ-ಪ್ರತ್ಯಾರೋಪಗಳ ನಡುವೆ, ದೇವಾಲಯದಲ್ಲಿ ನಗದು ಎಣಿಕೆ ಕೋಣೆಯೊಳಗೆ ಸಿಸಿಟಿವಿ ಅಳವಡಿಸುವಂತೆ ವಿಪಕ್ಷಗಳು ಆಗ್ರಹಿಸಿವೆ. ಅಲ್ಲದೇ ಪ್ರಕರಣದಲ್ಲಿ ಶಾಮೀಲಾದವರಿಗೆ ಕಠಿನ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿವೆ.



