ವೇಣೂರು: ವೇಣೂರು ಪ್ರಾಥಮಿಕ ಆರೋಗ್ಯಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕಂಬ ಇಲ್ಲಿಯ ಜನತೆಯ ಕೂಗು ಇಂದು ನಿನ್ನೆಯದಲ್ಲ. ಜನರು ಹಾಗೂ ಜನಪ್ರತಿನಿಧಿಗಳ ನಿರಂತರ ಒತ್ತಡದಿಂದಾಗಿ ಇಂದು ವೇಣೂರಿನಲ್ಲಿ 30 ಬೆಡ್ನ ಸರಕಾರಿ ಆಸ್ಪತ್ರೆ ನಿರ್ಮಾಣವಾಗಿದೆ.

ಹೌದು, ಸುಮಾರು 14 ಕೋಟಿ ವೆಚ್ಚದಲ್ಲಿ ವೇಣೂರು ಹೃದಯಭಾಗದ ಪೊಲೀಸ್ ಕ್ವಾಟ್ರಸ್ ಬಳಿ ಈ ಮೇಲ್ದರ್ಜೆಗೇರಿದ ವಿಶಾಲವಾದ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣವಾಗಿದ್ದು, ಶೇ. 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ವೇಣೂರಿನಲ್ಲಿ ಈಗ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾಮಾನ್ಯಜ್ವರ, ಆರೋಗ್ಯ ತಪಾಸಣೆ, ಗರ್ಭಿಣಿಯವರ ಆರೈಕೆ, ಲಸಿಕೆ ವಿತರಣೆ, ಮತ್ತು ತುರ್ತು ಪ್ರಾಥಮಿಕ ಚಿಕಿತ್ಸೆಗಳು ಲಭ್ಯವಿದೆ. ಇಲ್ಲಿನ ಜನತೆ ಆರೋಗ್ಯದ ಗಂಭೀರ ಸಮಸ್ಯೆ ಬಂದಾಗ ಬೆಳ್ತಂಗಡಿ ಅಥವಾ ಮೂಡುಬಿದಿರೆಯ ಆಸ್ಪತ್ರೆಗಳನ್ನು ಆಶ್ರಯಿಸಬೇಕಿತ್ತು.

ಎಸ್ಕೆಎಸ್ ಕಾರ್ಕಳ ಇನ್ಫ್ರೋ ಪ್ರೊಜೆಕ್ಟ್ ಪ್ರೈ.ಲಿ.ನವರು ಕಾಮಗಾರಿಯನ್ನು ನಿರ್ವಹಿಸುತ್ತಿದ್ದು, ಇನ್ನು ಒಂದೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಈ ಸುಸಜ್ಜಿತ ಆಸ್ಪತ್ರೆಯಲ್ಲಿ ಒಂದು ಮಹಡಿ ಹೊಂದಿದೆ. ವಿಶಾಲವಾದ ಕೊಠಡಿಗಳನ್ನು ಹೊಂದಿದ್ದು,ನೆಲಮಹಡಿಯಲ್ಲಿ ಸ್ವಾಗತದಾರ, ತುರ್ತು ಚಿಕಿತ್ಸಾ ಕೊಠಡಿ, ಒಪಿಡಿ, ವೈದ್ಯರ ಕೊಠಡಿಗಳು, ಹೆರಿಗೆಕೊಠಡಿ, ಲ್ಯಾಬ್, ಓಟಿ, ಎಕ್ಸ್ರೇ ಕೊಠಡಿ, ಫಾರ್ಮಸಿ, ೪ ಕಡೆ ಶೌಚಾಲಯಗಳು ಇದೆ. ಪ್ರತ್ಯೇಕ ಮೋರ್ಚರಿ ವ್ಯವಸ್ಥೆ ಮಾಡಲಾಗಿದೆ.

ಮೊದಲ ಮಹಡಿಯಲ್ಲಿ ಎ ವಾರ್ಡ್, ಮೀಟಿಂಗ್ ರೂಂ, ರೆಕಾರ್ಡ್ ರೂಂ, ಐಸಿಯು, ವೈದ್ಯರ ಕೊಠಡಿಗಳು, ಶುಶ್ರೂಶಕಿಯವರ ಕೊಠಡಿಗಳು, ಶೌಚಾಲಯಗಳು ಇವೆ.
30 ಹಾಸಿಗೆಯ ಹೈಟೆಕ್ ಆಸ್ಪತ್ರೆಗಳ ಪ್ರಮುಖ ಲಕ್ಷಣಗಳು
ಆಧುನಿಕ ಸೌಲಭ್ಯಗಳು: ಸುಸಜ್ಜಿತ ಆಪರೇಷನ್ ಥಿಯೇಟರ್ (OT), ಪ್ರಯೋಗಾಲಯ (LAB), ಮತ್ತು ಎಕ್ಸ್ರೇ (x-RAY) ವ್ಯವಸ್ಥೆ.
ತಜ್ಞ ವೈದ್ಯರು: ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಮತ್ತು ಸಾಮಾನ್ಯ ವೈದ್ಯರ ಲಭ್ಯತೆ.
ತುರ್ತು ಚಿಕಿತ್ಸೆ: ಸುಸಜ್ಜಿತವಾದ ಐಸಿಯು (ICU) ಅಥವಾ ತಾಯಿ ಮತ್ತು ಮಕ್ಕಳ ಆರೈಕೆ ಘಟಕ.
ಉಚಿತ ಮತ್ತು ರಿಯಾಯಿತಿ ಸೇವೆಗಳು: ಸರ್ಕಾರಿ ಯಮಾವಳಿಗಳ ಪ್ರಕಾರ ಬಡವರಿಗೆ ಉಚಿತ ಚಿಕಿತ್ಸೆ ಮತ್ತು ಔಷಧಿ ವಿತರಣೆ.
ಸುಮಾರು 6.50 ಎಕ್ರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಆಸ್ಪತ್ರೆ ತಾಲೂಕು ಆಸ್ಪತ್ರೆ ಮಾದರಿಯಲ್ಲಿ ದಿನದ 24 ಗಂಟೆ ಕಾರ್ಯಾನಿರ್ವಹಿಸಲಿದೆ. ಅತ್ಯಾಧುನಿಕ ಉಪಕರಣಗಳು, ತಜ್ಞವೈದ್ಯರು , ತುರ್ತು ಚಿಕಿತ್ಸಾ ಘಟಕಗಳನ್ನು ಒಳಗೊಂಡಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಆಸ್ಪತ್ರೆ ಬಡವರ ಪಾಲಿನ ಸಂಜೀವಿನಿ ಆಗುವುದರಲ್ಲಿ ಸಂದೇಹವಿಲ್ಲ.



