ಮಂಗಳೂರು, ಜೂ. 17: ಮಂಗಳೂರು ಮೂಲದ ಮಂಗಳಾ ಕಾಲೇಜು ವಿದ್ಯಾರ್ಥಿನಿ ಉಮ್ಮೆ ಕುಲ್ಸುಮ್ ಅವರು ಯಶಸ್ವಿಯಾಗಿ ಸ್ಟೆಮ್ ಸೆಲ್ ದಾನ ಮಾಡುವ ಮೂಲಕ ಕೆನಡಾದಲ್ಲಿ ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಮರುಜೀವ ನೀಡಿದ್ದಾರೆ.
ಉಮ್ಮೆ ಕುಲ್ಸುಮ್ ಅವರು ಮಂಗಳಾ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಮತ್ತು ಪ್ಯಾರಾ ಮೆಡಿಕಲ್ ಸೈನ್ಸಸ್ ನ ದ್ವಿತೀಯ ವರ್ಷದ ವಿದ್ಯಾರ್ಥಿನಿ.ಕೆಲ ತಿಂಗಳ ಹಿಂದೆ ಡಿಕೆಎಂಎಸ್ ಫೌಂಡೇಶನ್ ಇಂಡಿಯಾ ತಂಡವು ಮಂಗಳೂರಿನ ಸಮೂಹ ಸಂಸ್ಥೆಗೆ ಭೇಟಿ ನೀಡಿ ಸ್ಟೆಮ್ ಸೆಲ್ ದಾನದ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು 282 ವಿದ್ಯಾರ್ಥಿಗಳ ಮಾದರಿಗಳನ್ನು ಸಂಗ್ರಹಿಸಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ದಾನಿಗಳ ಡೇಟಾಬೇಸ್ಗೆ ಸೇರಿಸಲಾಗಿತ್ತು.ಇನ್ನು ಈ ಜಾಗೃತಿ ಕಾರ್ಯಕ್ರಮದಲ್ಲಿ ಉಮ್ಮೆ ಕುಲ್ಸುಮ್ ಅವರು ತಮ್ಮ ಸ್ಟೆಮ್ ಸೆಲ್ ಮಾದರಿಯನ್ನು ನೀಡಿದ್ದರು. ಬಳಿಕ ಉಮ್ಮೆ ಕುಲ್ಸುಮ್ ಅವರ ಸ್ಟೆಮ್ ಸೆಲ್ ರೋಗಿಯೊಬ್ಬರಿಗೆ ಹೊಂದಾಣಿಕೆಯಾಗುವುದನ್ನು ಕಂಡುಕೊಳ್ಳಲಾಯಿತು. ನಂತರ ಅಗತ್ಯ ವೈದ್ಯಕೀಯ ತಪಾಸಣೆಗಳನ್ನು ಪೂರ್ಣಗೊಳಿಸಿದ ಉಮ್ಮೆ ಕುಲ್ಸುಮ್ ಅವರು ಯಶಸ್ವಿಯಾಗಿ ದಾನ ಮಾಡಿದ್ದಾರೆ.
ಸ್ಟೆಮ್ ಸೆಲ್ ದಾನ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ನನ್ನ ಪೋಷಕರು, ಕಾಲೇಜಿನ ಪ್ರಿನ್ಸಿಪಾಲರು, ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಸಂಪೂರ್ಣ ಮಾಹಿತಿ ನೀಡಿ ಧೈರ್ಯ ತುಂಬಿದರು. ಅವರ ಪ್ರೋತ್ಸಾಹದಿಂದಲೇ ನಾನು ದಾನ ಮಾಡಲು ನಿರ್ಧರಿಸಿದೆ ಎಂದು ಉಮ್ಮೆ ಕುಲ್ಸುಮ್ ಅವರು ತಿಳಿಸಿದ್ದಾರೆ.ಇಂದು ಜಗತ್ತಿನಾದ್ಯಂತ ಸಾವಿರಾರು ರೋಗಿಗಳು ಸೂಕ್ತ ಸ್ಟೆಮ್ ಸೆಲ್ ದಾನಿಗಳಿಗಾಗಿ ಕಾಯುತ್ತಿದ್ದಾರೆ. ಆದರೆ ಅರಿವಿನ ಕೊರತೆಯಿಂದಾಗಿ ದಾನಿಗಳ ಸಂಖ್ಯೆ ಕಡಿಮೆಯಾಗಿದೆ. ರಕ್ತದಾನ ಜೀವ ಉಳಿಸಿದರೆ, ಸ್ಟೆಮ್ ಸೆಲ್ ದಾನ ಬದುಕನ್ನೇ ಮರಳಿ ನೀಡುತ್ತದೆ. ಯುವಜನತೆಯಲ್ಲಿ ಇದರ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ. ಮಗು ಜನಿಸಿದ ಸಂದರ್ಭ ಹೊಕ್ಕಳಬಳ್ಳಿಯಲ್ಲಿ ಇರುವ ಸ್ಟೆಮ್ ಸೆಲ್ ಗಳನ್ನು ವಿಶೇಷ ಸ್ಟೆಮ್ ಸೆಲ್ ಬ್ಯಾಂಕ್ಗಳಲ್ಲಿ ಸಂರಕ್ಷಿಸಬಹುದು. ಭವಿಷ್ಯದಲ್ಲಿ ಅಗತ್ಯ ಬಿದ್ದಾಗ ಅವು ಜೀವ ರಕ್ಷಕವಾಗಬಹುದು. ಉಮ್ಮೆ ಕುಲ್ಸುಮ್ ಅವರಂತಹ ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿಯಾಗಿದ್ದು, ಇನ್ನಷ್ಟು ಯುವಕರು ಸ್ಟೆಮ್ ಸೆಲ್ ದಾನಿಗಳಾಗಿ ನೋಂದಾಯಿಸಿಕೊಳ್ಳಲು ಪ್ರೇರಣೆಯಾಗಬೇಕು ಎಂದು ಮಂಗಳಾ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಗಣಪತಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿನಿ ಉಮ್ಮೆ ಕುಲ್ಸುಮ್ ಅವರ ಕಾರ್ಯ ಸಂಸ್ಥೆಗೆ ಹೆಮ್ಮೆ ತಂದಿದೆ. ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ಸಾಧನೆಗೆ ಸೀಮಿತವಾಗದೆ ಸಾಮಾಜಿಕ ಹೊಣೆಗಾರಿಕೆ ಅರಿತು ಕಾರ್ಯನಿರ್ವಹಿಸುತ್ತಿರುವುದು ಸಂತಸದ ವಿಷಯ ಎಂದು ಮಂಗಳಾ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಿನ್ಸಿಪಾಲ್ ಪ್ರತಿಜ್ಞಾ ಸುಹಾಸಿನಿ ಹೇಳಿದ್ದಾರೆ.ಈ ರೀತಿಯ ಸ್ಟೆಮ್ ಸೆಲ್ ದಾನವು ರಕ್ತದ ಕ್ಯಾನ್ಸರ್ ಮತ್ತು ಥಲಸ್ಸೆಮಿಯಾ ಮುಂತಾದ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಮರು ಜೀವನವನ್ನು ನೀಡುತ್ತದೆ.



