ಸಂತನ ಬದುಕು ಲೋಕ ಕಲ್ಯಾಣಗೋಷ್ಕರ: ಮಾಣಿಲ ಶ್ರೀ
ಬಂಟ್ವಾಳ: ಕಳೆದ 29 ವರ್ಷಗಳಿಂದ ಶ್ರೀಧಾಮದಲ್ಲಿ ತಾಯ್ತನದ ಶಕ್ತಿ ಮತ್ತು ಮಹಾತ್ಮೆಯಾಗಿ ನೆಲೆನಿಂತಿರುವ ಮಹಾತಾಯಿ ಶ್ರೀ ದುರ್ಗಾಮಹಾಲಕ್ಷ್ಮೀ ಎಲ್ಲವನ್ನೂ ನಡೆಸಿಕೊಂಡು ಬಂದಿದ್ದಾಳೆ. ಮಾಣಿಲ ಅಂದು ಕುಗ್ರಾಮ, ಇಂದು ಸುಗ್ರಾಮ ಆಗುತ್ತಾಬಂದಿದೆ. ಅಜ್ಞಾನದಿಂದ ಕೂಡಿದ್ದ ಗ್ರಾಮದಲ್ಲಿ ಇಂದು ಮನುಷ್ಯ ಅಭಿವೃದ್ಧಿ ಕಂಡಿದ್ದಾನೆ. ಸಂತನ ಬದುಕು ಲೋಕ ಕಲ್ಯಾಣಗೋಷ್ಕರವಾಗಿದ್ದು, ಎಲ್ಲರೊಂದಿಗೂ ಪ್ರೀತಿ-ಸಹಭಾಳ್ವೆಯಿಂದ ಬದುಕೋಣ ಎಂದು ಯೋಗಿ ಕೌಸ್ತುಭ ಕರ್ಮಯೋಗಿ ಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.
ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಫೆ. ೨೬ರಂದು ಶ್ರೀ ದುರ್ಗಾಮಹಾಲಕ್ಷ್ಮೀ, ವಿಠೋಭಾ ರುಕ್ಮಾಯಿ ಹಾಗೂ ನಾಗದೇವರ ಪ್ರತಿಷ್ಠಾ ವರ್ಧಂತ್ಯುತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಅವರು ಸಮಾರಂಭವನ್ನು ಉದ್ಘಾಟಿಸಿ, ಯಾವುದೇ ಕ್ಷೇತ್ರ ಬೆಳಗಲು ಭಕ್ತಾಧಿಗಳ ಸಹಕಾರ ಅಗತ್ಯ. ಮಾಣಿಲ ಎಂಬ ಈ ಪರಿಸರ ಇನ್ನಷ್ಟು ಬೆಳೆದು ಸ್ವಾಮೀಜಿಯರ ಅನುಗ್ರಹ ಎಲ್ಲರಿಗೂ ಮತ್ತಷ್ಟು ಲಭಿಸಲಿ ಎಂದರು.
ಮಂಗಳೂರು ಕಿಟ್ಟೆಲ್ ಮೆಮೋರಿಯಲ್ ಪಿಯು ಕಾಲೇಜಿ ಪ್ರಾಚಾರ್ಯರಾದ ವಿಠಲ ಎ. ಅವರು ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರು ಚಿಂತನೆಯ ಹಾದಿಯಲ್ಲಿ ಇಲ್ಲಿಯ ಸ್ವಾಮೀಜಿ ಮುಂದುವರಿಯುತ್ತಿರುವುದು ಅವರ ಆಶೀರ್ವಚನಗಳಲ್ಲಿ ಕಾಣುತ್ತಿದೆ. ಧಾರ್ಮಿಕ ಚಿಂತನೆ ಜೊತೆ ಸಾಮಾಜಿಕ ಚಿಂತನೆ ಹೊಂದಿರುವ ಸ್ವಾಮೀಜಿಯವರ ಆಶಯ, ಚಿಂತನೆ ರಾಷ್ಟ್ರವ್ಯಾಪ್ತಿ ಫಸರಿಸಲಿ ಎಂದು ಹೇಳಿದರು.
ಸಿವಿಲ್ ಕಾಂಟ್ರಕ್ಟರ್ ಜಗದೀಶ್ ಪಾಕಜೆ, ಪ್ರದೀಪ್ ತಾರಿಪಡ್ಪು ನರಿಕೊಂಬು, ಮಂಗಳೂರಿನ ಉದ್ಯಮಿ ಸೂರಜ್ ಮಂಗಳೂರು, ಸಂತೋಷ್ ಬಂಟ್ವಾಳ ಸರ್ವೇಯರ್, ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಗೌರವಾಧ್ಯಕ್ಷತೆ ರೇವತಿ ಪೆರ್ನೆ, ಅಧ್ಯಕ್ಷೆ ವನಿತಾ ವೇದಿಕೆಯಲ್ಲಿದ್ದರು.
ನಳಿನಿ ಮಾಣಿಲ ಪ್ರಾರ್ಥಿಸಿ, ಶ್ರೀಧಾಮದ ಟ್ರಸ್ಟಿ ಚಂದ್ರಶೇಖರ್ ಸ್ವಾಗತಿಸಿ, ವಂದಿಸಿದರು.
ಕ್ಷೇತ್ರದಲ್ಲಿ ೧೨ ತೆಂಗಿನಕಾಯಿ ಗಣಯಾಗ, ನವಗ್ರಹಶಾಂತಿ ಹೋಮ, ಚಂಡಿಕಾಯಾಗ, ನವಕ ಕಲಶ ಭಜನ ಸಂಕೀರ್ತನೆ ನಡೆಯಿತು. ಸಂಜೆ ದುರ್ಗಾನಮಸ್ಕಾರ ಪೂಜೆ ನಡೆದು ರಾತ್ರಿ ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ನಡೆಯಿತು.





