ಬಂಟ್ವಾಳ , ಫೆ. 11: ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಕೊನೆಗೆ ಹಲ್ಲೆಯಲ್ಲಿ ಅಂತ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಖಾಸಗಿ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಹೇಮಂತ್ ಎಂಬ ವಿದ್ಯಾರ್ಥಿಯಿಂದ ಅಪ್ರಾಪ್ತ ವಿದ್ಯಾರ್ಥಿಗೆ ಚೂರಿಯಿಂದ ಹಲ್ಲೆ ಮಾಡಲಾಗಿದೆ. ಈ ವೇಳೆ ಗಲಾಟೆ ಬಿಡಿಸಲು ಬಂದ ಮತ್ತೊಬ್ಬ ವಿದ್ಯಾರ್ಥಿಗೂ ಗಾಯವಾಗಿದೆ. ಸದ್ಯ ಹೇಮಂತ್ನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ಕಾಲೇಜ್ ವಿಚಾರವಾಗಿ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಹೇಮಂತ್ ಅಪ್ರಾಪ್ತ ವಿದ್ಯಾರ್ಥಿಗೆ ಚೂರಿಯಿಂದ ಹಲ್ಲೆ ಮಾಡಿದ್ದಾರೆ. ಇನ್ನು ಗಲಾಟೆ ತಪ್ಪಿಸಲು ಬಂದ ಮತ್ತೊಬ್ಬ ವಿದ್ಯಾರ್ಥಿ ಮೇಲೂ ಹಲ್ಲೆ ಮಾಡಲಾಗಿದ್ದು ಗಾಯವಾಗಿದೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಬೆನ್ನಿಗೆ ಗಾಯವಾಗಿದ್ದು, ಮತ್ತೋರ್ವನಿಗೆ ತೊಡೆ ಭಾಗದಲ್ಲಿ ಗಾಯವಾಗಿದೆ. ಸದ್ಯ ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳಿಗೂ ವಿಟ್ಲ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇನ್ನು ಆಸ್ಪತ್ರೆಗೆ ಬಂಟ್ವಾಳ ಡಿವೈಎಸ್ಪಿ ಭೇಟಿ ನೀಡಿದ್ದಾರೆ. ಘಟನೆ ತಿಳಿದು ಸಮುದಾಯ ಆಸ್ಪತ್ರೆ ಬಳಿ ಸೇರಿದ ಜನರನ್ನು ಪೊಲೀಸರು ಚದುರಿಸಿದ್ದಾರೆ.






