ಮಾಣಿಲ ಶ್ರೀ, ಶಾಸಕ ಡಾ. ಭರತ್ ಶೆಟ್ಟಿ, ಶಕುಂತಳಾ ಶೆಟ್ಟಿ, ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಡಾ. ನವೀನ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಭಾಗಿ
ಬಂಟ್ವಾಳ: ಮುತ್ತೂರು ಬೆಜ್ಜೆ ಬಂಜನ್ ಕುಟುಂಬದ ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಮೊಗ ಸಮರ್ಪಣೆ ಹಾಗೂ ವೈಭವದ ನೇಮೋತ್ಸವ ಮತ್ತು ಕೋಲೋತ್ಸವವು ಫೆ. 7ರಂದು ಆರಂಭವಾಗಿ ಫೆ. 8 ರಂದು ಸಂಜೆ ಸಂಪನ್ನಗೊಂಡಿತು.

ಫೆ. 7ರಂದು ಬೆಳಿಗ್ಗೆ ಶ್ರೀ ನಾಗ ಮತ್ತು ನಾಗಬ್ರಹ್ಮ ದೇವರಿಗೆ ತಂಬಿಲಸೇವೆ, ಗಣಪತಿ ಹೋಮ, ದೈವಗಳಿಗೆ ನವಕ ಕಲಶ, ಪುನರ್ ಪ್ರತಿಷ್ಠೆ, ಮುಡಿಪು ಶುದ್ಧ ನಡೆಯಿತು. ಕುಪ್ಪೆಟ್ಟು ಪಂಜುರ್ಲಿ ದರ್ಶನದೊಂದಿಗೆ ದೈವಗಳಿಗೆ ಮೊಗ ಸಮರ್ಪಿಸಲಾಗಿದ್ದು, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.
ನೇಮೋತ್ಸವ
ಫೆ. 7ರ ಸಂಜೆ ಮಹಿಷಂದಾಯ, ಜುಮಾದಿ ಅಣ್ಣಪ್ಪ ಪಂಜುರ್ಲಿ ದೈವಗಳಿಗೆ ನೇಮೋತ್ಸವ ನೆರವೇರಿತು. ರಾತ್ರಿ ಅನ್ನ ಸಂತರ್ಪಣೆ ನಡೆಯಿತು.

ಕೋಲೋತ್ಸವ
ಫೆ. 8ರಂದು ಶ್ರೀ ಸತ್ಯದೇವತೆ (ಪೊಸಪ್ಪೆ), ಹಿರಿಯಜ್ಜ, ಕುಪ್ಪೆಟ್ಟು ಮಂತ್ರದೇವತೆ, ಕಲ್ಲುರ್ಟಿ, ಕುಪ್ಪೆಟ್ಟು ಪಂಜುರ್ಲಿ, ಸ್ಥಳದ ಕಲ್ಲುರ್ಟಿ ಪಂಜುರ್ಲಿ, ಕುಟುಂಬದ ಕಲ್ಲುರ್ಟಿ ಪಂಜುರ್ಲಿ, ಕೊರತಿ, ಗುಳಿಗ ಮತ್ತು ಒಂಟಿ ಗುಳಿಗ ದೈವಗಳಿಗೆ ಕೋಲೋತ್ಸವ ಜರಗಿ ಫೆ. 9ರ ಸಂಜೆ ಸಂಪನ್ನಗೊಂಡಿತು.
ಮಾಣಿಲ ಶ್ರೀದಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶಾಸಕ ಡಾ. ವೈ. ಭರತ್ ಶೆಟ್ಟಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ದ.ಕ. ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಚಾರ್ಯರ ಸಂಘದ ಅಧ್ಯಕ್ಷ ಡಾ. ನವೀನ್ ಶೆಟಿ, ಪ.ಪೂ. ಕಾಲೇಜು ನೌಕರರ ಸಹಕಾರಿ ಸಂಘ (ನಿ.) ಮಂಗಳೂರು ಇದರ ಅಧ್ಯಕ್ಷರಾದ ದುಗ್ಗಪ್ಪ ಎನ್., ಕರ್ನಾಟಕ ರಾಜ್ಯ ಪ.ಪೂ. ಕಾಲೇಜು ಪ್ರಾಂಶುಪಾಲರ ಸಂಘದ ರಾಜ್ಯ ಕಾರ್ಯದರ್ಶಿ ಜಯಾನಂದ ಎನ್. ಸುವರ್ಣ ಸೇರಿದಂತೆ ಕುಟುಂಬದ ಗುರಿಕಾರರು, ದೈವದ ಪರಿಚಾರಕರು, ಸೇರಿದಂತೆ ಹಲವು ಗಣ್ಯರು, ಧಾರ್ಮಿಕ ಮುಖಂಡರು, ಊರಿನ ಗಣ್ಯರು ಹಾಗೂ ಕುಟುಂಬಸ್ಥರು ಮತ್ತು ನೆಂಟಸ್ಥರು ಭಾಗವಹಿಸಿದ್ದರು. ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು, ಸದಸ್ಯರು ಎಲ್ಲರನ್ನು ಸ್ವಾಗತಿಸಿ, ಸತ್ಕರಿಸಿದರು.


ಇಡೀ ಬಂಜನ್ ಕುಟುಂಬದ ಸಾಂಸರಿಕ ಜೀವನಕ್ಕೆ ನೆಮ್ಮದಿ ಪ್ರಾಪ್ರಿಯಾಗಲಿ: ಮಾಣಿಲ ಶ್ರೀ
ದೈವಗಳ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವದಲ್ಲಿ ದಿವ್ಯ ಉಪಸ್ಥಿತಿ ಇದ್ದ ಮಾಣಿಲ ಶ್ರೀದಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಇಡೀ ಹಿಂದೂ ಸಮಾಜದ ದೈವರಾಧನೆಗೆ ಇಂದು ದೊಡ್ಡ ಕೊರತೆ ಆಗಿರುವುದು ವೈದಿಕ ಪ್ರಕ್ರಿಯೆಗೆ. ಕಟ್ಟುಪಾಡು, ವ್ಯವಸ್ಥೆಯಲ್ಲಿ ವ್ಯತ್ಯಾಸ ಆದಾಗ ತೊಂದರೆ ಆಗುತ್ತದೆ. ಅದಕ್ಕೆ ಸರಿಯಾದ ಮಾರ್ಗದರ್ಶನ ಸಿಕ್ಕಾಗ ಫಲ ಪ್ರಾಪ್ತಿಯಾಗುತ್ತದೆ. ಇಂದು ಬೆಜ್ಜೆ ಕುಟುಂಬಕ್ಕೆ ಒಳ್ಳೆಯ ಮಾರ್ಗದರ್ಶನ ನೀಡುವವರು ಲಭಿಸಿದ್ದು, ಕುಟುಂಬಸ್ಥರೆಲ್ಲರಿಗೂ ದೈವ, ದೇವರ ಕೃಪೆ ಪ್ರಾಪ್ತಿಯಾಗಿದೆ. ಕುಟುಂಬದ ಮೇಲೆ ಪ್ರೀತಿಯಿಟ್ಟು ದುಡಿದವರಿಗೂ ಹಾಗೂ ಕುಟುಂಬಸ್ಥರೆಲ್ಲರಿಗೂ ದೈವರ ಅನುಗ್ರಹ ಲಭಿಸಲಿ. ಮುಂದೆಯೂ ಬೆಜ್ಜೆಯ ಮಣ್ಣು ಮತ್ತು ಇಲ್ಲಿಯ ದೈವ-ದೇವರುಗಳ ಸೇವೆ ಮಾಡುವ ಮನಸ್ಸು ಕುಟುಂಬಸ್ಥರೆಲ್ಲರಿಗೂ ಹುಟ್ಟಿ ಬರಲಿ. ಸಂತಾನ, ಸಂಸಾರಿಕ ಜೀವನ ನೆಮ್ಮದಿ, ಕುಟುಂಬಕ್ಕೆ ಸಿಗಲಿ ಎಂದು ಸ್ವಾಮೀಜಿ ಹೇಳಿದರು.






