ಬೆಂಗಳೂರು: ಬೆಂಗಳೂರಿನ ಐತಿಹಾಸಿಕ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಪುನರಾರಂಭಿಸಲು ಅಂತಿಮವಾಗಿ ಗ್ರೀನ್ ಸಿಗ್ನಲ್ ದೊರೆತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದ ಘಟನೆಯ ನಂತರ, ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವುದಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಇದೀಗ ಬೆಂಗಳೂರು ಪೊಲೀಸರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಕಟ್ಟುನಿಟ್ಟಾದ 17 ಅಂಶಗಳ ಮಾರ್ಗಸೂಚಿಯನ್ನು ಸಿದ್ಧಪಡಿಸಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಲು ಸಜ್ಜಾಗಿದ್ದಾರೆ.ಗೃಹ ಇಲಾಖೆ ಸಿದ್ಧಪಡಿಸಿರುವ ಈ ಷರತ್ತುಗಳ ಕುರಿತು ಕೆಎಸ್ಸಿಎ ಪದಾಧಿಕಾರಿಗಳು ಗೃಹ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರ ತಂಡ ಗೃಹ ಸಚಿವರನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಲಿದೆ.ಪೊಲೀಸ್ ಕಮಿಷನರ್ ಅವರು ನ್ಯಾ. ಮೈಕಲ್ ಡಿ ಕುನ್ಹಾ ಸಮಿತಿ ವರದಿಯ ಶಿಫಾರಸುಗಳನ್ನು ಆಧರಿಸಿ, ಕಾಲ್ತುಳಿತದಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಲು ಈ 17 ಷರತ್ತುಗಳನ್ನು ವಿಧಿಸಿದ್ದಾರೆ. ಕೆಎಸ್ಸಿಎ ಈ ಷರತ್ತುಗಳನ್ನು ಈಡೇರಿಸಿದ ತಕ್ಷಣವೇ ಪಂದ್ಯಗಳನ್ನು ಆಯೋಜಿಸಲು ಅನುಮತಿ ನೀಡಲಾಗುವುದು ಎಂದು ತಿಳಿದುಬಂದಿದೆ.





