ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ 1990ರಿಂದ 2021ರ ನಡುವೆ ಸಂಭವಿಸಿದೆ ಎನ್ನಲಾದ 74 ಅಸಹಜ ಸಾವು ಪ್ರಕರಣಗಳ ಈಗಿನ ವಸ್ತುಸ್ಥಿತಿ, ಈವರೆಗೆ ತೆಗೆದುಕೊಂಡಿರುವ ಕ್ರಮಗಳು ಹಾಗೂ ಮುಂದೆ ಕೈಗೊಳ್ಳಬೇಕೆಂದಿರುವ ಕ್ರಮಗಳ ಕುರಿತು 2 ವಾರಗಳಲ್ಲಿ ವಿವರಣೆ ನೀಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಜತೆಗೆ ರಾಜ್ಯ ಸರಕಾರಕ್ಕೆ ನೋಟಿಸ್ ಸಹ ಜಾರಿಗೊಳಿಸಿದೆ.
ಈ ವಿಚಾರವಾಗಿ ವಿದ್ಯಾರ್ಥಿನಿ ಸೌಜನ್ಯಾ ತಾಯಿ ಕುಸುಮಾವತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಹಾಗೂ ನ್ಯಾ। ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಫೆ.3ರಂದು ವಿಚಾರಣೆ ನಡೆಸಿತು.
ಈ ವೇಳೆ ಸರಕಾರದ ಪರ ವಾದ ಮಂಡಿಸಿದ ಅಡ್ವಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಇದು 74 ಪ್ರಕರಣಗಳ ವಿಚಾರವಾಗಿದೆ. ಯಾವ ಪ್ರಕರಣ ಯಾವ ಹಂತದಲ್ಲಿದೆ, ಈವರೆಗೆ ಏನಾಗಿದೆ ಎಂಬ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡು ಒಂದು ವಾರದಲ್ಲಿ ನ್ಯಾಯಾಲಯಕ್ಕೆ ಸಂಪೂರ್ಣ ವಿವರಗಳನ್ನು ನೀಡಲಾಗುವುದು ಎಂದು ಹೇಳಿದರು.
ಅರ್ಜಿದಾರರ ಪರ ಹಿರಿಯ ವಕೀಲ ಎಸ್. ಬಾಲನ್, ಎಲ್ಲ 74 ಪ್ರಕರಣಗಳೂ ತನಿಖೆ ಮತ್ತು ವಿಚಾರಣೆಗೊಳಪಡಿಸಬೇಕಾದ ಪ್ರಕರಣಗಳಾಗಿವೆ ಎಂದರು. ಅದಕ್ಕೆ ಆಗಲಿ ಮೊದಲು ಸರಕಾರದಿಂದ ಮಾಹಿತಿ ಬರಲಿ ಎಂದು ಹೇಳಿ ವಿಚಾರಣೆಯನ್ನು ಫೆ.19ಕ್ಕೆ ಮುಂದೂಡಿತು.
ಈ ಮಧ್ಯೆ, ಅರ್ಜಿಯಲ್ಲಿ ರಾಜ್ಯ ಸರಕಾರವನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ ಎಂಬ ವಿಚಾರವನ್ನು ಸರಕಾರದ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ರಾಜ್ಯಸರಕಾರವನ್ನು ಪ್ರತಿವಾದಿಯನ್ನಾಗಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿತು.






