ಬೆಂಗಳೂರು: ಗುರುವಾರ ನಡೆಸಲು ಸಾರಿಗೆ ನೌಕರರು ಸಜ್ಜಾಗಿದ್ದಾರೆ. ಎಲ್ಲಾ ನೌಕರರು ಒಟ್ಟುಗೂಡಿ ಬೀದಿಗಿಳಿದು ಉಗ್ರ ಹೋರಾಟ ನಡೆಸಿ ಬೆಂಗಳೂರು ಚಲೋ ನಡೆಸಲು ಯೋಜನೆ ರೂಪಿಸಿದ್ದಾರೆ. ಇದರಿಂದ ಪ್ರಯಾಣಿಕರಲ್ಲಿ ಬಸ್ಗಳು ಓಡಾಡುತ್ತಾ ಇಲ್ವಾ ಎಂಬ ಬಗ್ಗೆ ಭಾರೀ ಗೊಂದಲ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಸಾರಿಗೆ ನೌಕರರಿಗೆ ಕೆಎಸ್ಆರ್ಟಿಸಿ ಖಡಕ್ ಎಚ್ಚರಿಕೆ ನೀಡಿದೆ. ಬಸ್ಗಳ ಸಂಚಾರದ ಬಗ್ಗೆ ವಾರ್ನಿಂಗ್ ನೀಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ನೌಕರರಿಗೆ ಮಹಾನಿರ್ದೇಶಕರು ತೀವ್ರ ಎಚ್ಚರಿಕೆ ನೀಡಿದ್ದಾರೆ. ಜಂಟಿ ಕ್ರಿಯಾ ಸಮಿತಿ ಕರೆ ನೀಡಿರುವ ಜನವರಿ 29 (ಗುರುವಾರ) ‘ಬೆಂಗಳೂರು ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಸೂಚಿಸಲಾಗಿದೆ.
ಗುರುವಾರ ಬೆಂಗಳೂರು ಚಲೋಗೆ ಕರೆ ಕೊಟ್ಟಿರುವ ಜಂಟಿ ಕ್ರಿಯಾ ಸಮಿತಿ!
ಜಂಟಿ ಕ್ರಿಯಾ ಸಮಿತಿಯು 01-01-2020 ರಿಂದ 28-02-2023ರವರೆಗಿನ 38 ತಿಂಗಳ ವೇತನ ಪರಿಷ್ಕರಣೆ ಹಿಂಬಾಕಿ ಮತ್ತು 01-01-2024ರಿಂದ ನಾಲ್ಕು ವರ್ಷಗಳ ವೇತನ ಒಪ್ಪಂದಕ್ಕಾಗಿ ಆಗ್ರಹಿಸಿ ಈ ಪ್ರತಿಭಟನೆಗೆ ಕರೆ ನೀಡಿದೆ. ಆದರೆ ಕೆಎಸ್ಆರ್ಟಿಸಿ ಎಂಡಿ ಅಕ್ರಂ ಪಾಷ್ ಅವರು ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಸಾರಿಗೆ ನೌಕರರಿಗೆ ಕೆಎಸ್ಆರ್ಟಿಸಿ ಖಡಕ್ ಎಚ್ಚರಿಕೆ ನೀಡಿದ್ದು, ಮುಷ್ಕರ, ಪ್ರತಿಭಟನೆ ಅಥವಾ ಯಾವುದೇ ರೀತಿಯ ಸಾರಿಗೆ ವಿರೋಧಿ ಚಟುವಟಿಕೆಗೆ ಭಾಗಿಯಾದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.





