ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಮಹತ್ವದ ತಿರುವು ಕಂಡುಬಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮುಂದಿನ ನಾಯಕತ್ವದ ಚರ್ಚೆಗಳು ತೀವ್ರಗೊಂಡಿವೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ ಎಂಬ ಮಾಹಿತಿ ಕಾಂಗ್ರೆಸ್ ಮೂಲಗಳಿಂದ ಕೇಳಿಬರುತ್ತಿದೆ.
ಮುಂದಿನ ಸೋಮವಾರ ಡಿಕೆ ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಅದಕ್ಕೂ ಮುನ್ನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ. ಸಭೆಯಲ್ಲಿ ಅಧಿಕೃತವಾಗಿ ನಾಯಕ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಇದಾದ ಬಳಿಕ ಸೋಮವಾರ ಸಂಜೆ ರಾಜಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೊಸ ಸರ್ಕಾರ ರಚನೆಯ ಭಾಗವಾಗಿ ಡಿಕೆ ಶಿವಕುಮಾರ್ ಅವರೊಂದಿಗೆ ಕೆಲ ಹಿರಿಯ ಶಾಸಕರು ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.ಒಂದು ಮೂಲದ ಪ್ರಕಾರ, ಮೊದಲ ಹಂತದಲ್ಲಿ ಏಳು ಮಂದಿ ಹಿರಿಯ ಹಾಗೂ ಅನುಭವಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದು ಮೂಲಗಳ ಪ್ರಕಾರ, 12 ರಿಂದ 13 ಮಂದಿ ಶಾಸಕರು ಮೊದಲ ಹಂತದಲ್ಲೇ ಸಚಿವ ಸಂಪುಟ ಸೇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಚಿವ ಸ್ಥಾನಕ್ಕೆ ಯಾರ್ಯಾರು?
ಕಾಂಗ್ರೆಸ್ ಮೂಲಗಳ ಮಾಹಿತಿ ಪ್ರಕಾರ, ಈಗಿನ ಸಂಪುಟದ ಅನೇಕ ಸಚಿವರು ಮರು ಸೇರ್ಪಡೆಗೊಳ್ಳುವ ವಿಶ್ವಾಸದಲ್ಲಿದ್ದಾರೆ. ಮೊದಲ ಹಂತದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇರುವ ನಾಯಕರ ಪಟ್ಟಿಯಲ್ಲಿ: ಕೃಷ್ಣ ಭೈರೇಗೌಡ, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ಕೆ.ಜೆ. ಜಾರ್ಜ್, ಈಶ್ವರ್ ಖಂಡ್ರೆ, ಎಂಬಿ ಪಾಟೀಲ್, ಡಾ.ಜಿ. ಪರಮೇಶ್ವರ್, ಎಚ್.ಕೆ. ಪಾಟೀಲ್, ಶಿವರಾಜ ತಂಗಡಗಿ, ಕೆ.ಎಚ್. ಮುನಿಯಪ್ಪ, ಮಂಕಾಳ್ ವೈದ್ಯ, ಸಂತೋಷ್ ಲಾಡ್, ರಾಮಲಿಂಗಾ ರೆಡ್ಡಿ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ.ಇದರ ಹೊರತಾಗಿ, ಡಿಕೆ ಶಿವಕುಮಾರ್ ಅವರು ತಮ್ಮ ಆಪ್ತರ ಕೆಲ ಹೆಸರನ್ನು ಈಗಾಗಲೇ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದ್ದು, ಅಂತಿಮ ನಿರ್ಧಾರ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆಯ ಬಳಿಕ ಪ್ರಕಟವಾಗುವ ಸಾಧ್ಯತೆ ಇದೆ.
ಹೊಸ ಸಚಿವ ಸಂಪುಟ ರಚನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಒಳಗೆ ತೀವ್ರ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಸಚಿವ ಸ್ಥಾನಕ್ಕಾಗಿ ಹಲವು ಶಾಸಕರು ದೆಹಲಿ ಹಾಗೂ ಬೆಂಗಳೂರಿನಲ್ಲಿ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ.ಹೈಕಮಾಂಡ್ ಮಟ್ಟದಲ್ಲೂ ಜಾತಿ, ಪ್ರದೇಶ ಹಾಗೂ ರಾಜಕೀಯ ಸಮತೋಲನದ ಲೆಕ್ಕಾಚಾರಗಳು ಜೋರಾಗಿದ್ದು, ಅಂತಿಮ ಪಟ್ಟಿ ರೂಪಿಸುವ ಕಾರ್ಯ ಅಂತಿಮ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಸ್ಪೀಕರ್ ಹುದ್ದೆಗೂ ಹೊಸ ಮುಖ?
ರಾಜಕೀಯ ವಲಯದಲ್ಲಿ ಮತ್ತೊಂದು ಪ್ರಮುಖ ಚರ್ಚೆ ವಿಧಾನಸಭೆ ಸ್ಪೀಕರ್ ಹುದ್ದೆಯ ಬಗ್ಗೆ ನಡೆದಿದೆ. ಬಲ್ಲ ಮೂಲಗಳ ಪ್ರಕಾರ, ಹಾಲಿ ಸ್ಪೀಕರ್ ಯುಟಿ ಖಾದರ್ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಅವರು ಸ್ಪೀಕರ್ ಹುದ್ದೆಯಿಂದ ಕೆಳಗಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ತೆರವಾಗುವ ಸ್ಪೀಕರ್ ಸ್ಥಾನಕ್ಕೆ ದಿನೇಶ್ ಗುಂಡೂರಾವ್, ಎಚ್.ಕೆ. ಪಾಟೀಲ್ ಅಥವಾ ಡಾ.ಜಿ. ಪರಮೇಶ್ವರ್ ಹೆಸರುಗಳು ಕಾಂಗ್ರೆಸ್ ವಲಯದಲ್ಲಿ ಚರ್ಚೆಯಾಗುತ್ತಿವೆ.
ಡಿಕೆ ಶಿವಕುಮಾರ್ ಪರ ಅಭಿಮಾನಿಗಳ ಪೂಜೆ
ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ರಾಜ್ಯದ ಹಲವು ಭಾಗಗಳಲ್ಲಿ ಅವರ ಅಭಿಮಾನಿಗಳು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಹೋಮಗಳನ್ನು ನಡೆಸುತ್ತಿದ್ದಾರೆ. ಒಟ್ಟಿನಲ್ಲಿ, ಸಿದ್ದರಾಮಯ್ಯ ರಾಜೀನಾಮೆಯೊಂದಿಗೆ ಆರಂಭವಾದ ನಾಯಕತ್ವ ಬದಲಾವಣೆ ಪ್ರಕ್ರಿಯೆಗೆ ಸೋಮವಾರ ಅಂತಿಮ ರೂಪ ಸಿಗುವ ಸಾಧ್ಯತೆ ಇದ್ದು, ರಾಜ್ಯ ರಾಜಕೀಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.





