ಬೆಂಗಳೂರು, ಆಗಸ್ಟ್ 6: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಇಂದಿನವರೆಗಿನ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ 1 ಕೋಟಿ 11 ಲಕ್ಷದ 705 ಮತದಾರರ ಹೆಸರು ಮತಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಆದರೆ, ಯಾವುದೇ ಕಾರಣವಿಲ್ಲದೆ ಮತದಾರರ ಹೆಸರುಗಳನ್ನು ಆಯೋಗ ಡಿಲೀಟ್ ಮಾಡಿಲ್ಲ. ಮತದಾರರನ್ನು ASDDO ಅಂದರೆ Absent (ಗೈರಾದವರು), Shifted (ಸ್ಥಳಾಂತರಗೊಂಡವರು), Dead (ಮೃತಪಟ್ಟವರು), Duplicate and Others (ನಕಲಿ ಹೆಸರುಗಳು ಅಥವಾ ಇತರ ಕಾರಣಗಳಿಂದ ಕೈಬಿಟ್ಟವರು) ಎಂಬ ವರ್ಗಗಳಾಗಿ ವಿಂಗಡಿಸಲಾಗಿದೆ.


SIR ಪ್ರಕ್ರಿಯೆ ಶೇ 99.96ರಷ್ಟು ಪೂರ್ಣ
ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿಗೆ ಎನ್ಯೂಮರೇಷನ್ ಫಾರಂ ನೀಡಲಾಗಿತ್ತು. ಈ ಪೈಕಿ 5,53,93,875 ಫಾರಂಗಳ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನೂ 22,972 ಫಾರಂಗಳು ಬಾಕಿ ಉಳಿದಿದ್ದು, ಇವು ಮತದಾರರು ಅಥವಾ ಬಿಎಲ್ಒಗಳ ಹಂತದಲ್ಲಿರಬಹುದು.
ಒಟ್ಟು ಪ್ರಕ್ರಿಯೆಗೊಂಡ ಫಾರಂಗಳ ಪೈಕಿ ಶೇ 79ರಷ್ಟು, ಅಂದರೆ 4,43,04,632 ಮತದಾರರು ಫಾರಂ ಭರ್ತಿ ಮಾಡಿ ಸಲ್ಲಿಸಿದ್ದಾರೆ. ಈ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಇವರ ಹೆಸರುಗಳು ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲಿವೆ.
1 ಕೋಟಿಗೂ ಅಧಿಕ ಮತದಾರರು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ
SIR ಪ್ರಕ್ರಿಯೆಯಲ್ಲಿ 1 ಕೋಟಿಗೂ ಅಧಿಕ ಮತದಾರರನ್ನು ASDDO ಪಟ್ಟಿಯಲ್ಲಿ ವರ್ಗೀಕರಿಸಲಾಗಿದೆ. ಇದರಲ್ಲಿ ಗೈರುಹಾಜರಾದವರು, ಸ್ಥಳಾಂತರಗೊಂಡವರು, ಮೃತಪಟ್ಟವರು, ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರು ಹಾಗೂ ಇತರೆ ಕಾರಣಗಳಿಂದ ಪ್ರಕ್ರಿಯೆಯಲ್ಲಿ ಭಾಗಿಯಾಗದವರು ಸೇರಿದ್ದಾರೆ.
ASDDO ಪಟ್ಟಿಯಲ್ಲಿರುವ ಮತದಾರರು ತಮ್ಮ ಹೆಸರು ಸೇರ್ಪಡೆ ಮಾಡಿಕೊಳ್ಳಲು ಹಾಗೂ ಅಗತ್ಯ ತಿದ್ದುಪಡಿಗಳನ್ನು ಮಾಡಿಕೊಳ್ಳಲು ಅವಕಾಶವಿದೆ. ಗೈರಾಗಿದ್ದವರು, ಸ್ಥಳಾಂತರಗೊಂಡವರು ಹಾಗೂ ಫಾರಂ ಭರ್ತಿ ಮಾಡದವರು ಅಗತ್ಯ ಪ್ರಕ್ರಿಯೆ ಕೈಗೊಳ್ಳಬಹುದು. ವಿಳಾಸ ಬದಲಾವಣೆ ಅಥವಾ ಇತರೆ ತಿದ್ದುಪಡಿಗಳಿಗಾಗಿ Form 6 ಮತ್ತು Form 8 ಮೂಲಕ ಅಪ್ಡೇಟ್ ಮಾಡಿಕೊಳ್ಳಲು ಅವಕಾಶವಿದೆ.



