ಮಂಗಳೂರು, ಜ. 20: ಭಾರತ ಚುನಾವಣ ಆಯೋಗದಿಂದ ಕರ್ನಾಟಕ ರಾಜ್ಯದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಘೋಷಣೆ ಶೀಘ್ರದಲ್ಲೇ ನಿರೀಕ್ಷಿಸಲಾಗಿರುವುದರಿಂದ, ಪೂರ್ವಭಾವಿ ಚಟುವಟಿಕೆಯಾದ ಮ್ಯಾಪಿಂಗ್ ಕಾರ್ಯ ಪ್ರಗತಿಯಲ್ಲಿದ್ದು, 2002ರ ಮತದಾರರ ಪಟ್ಟಿಗೆ ಸಂಬಂಧಿಸಿದ ಈ ಕೆಳಕಂಡ ವಿವರಗಳನ್ನು ಬೂತ್ ಮಟ್ಟದ ಅಧಿಕಾರಿಗಳಿಗೆ ನೀಡಿ ಮ್ಯಾಪಿಂಗ್ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ.
ಮ್ಯಾಪಿಂಗ್ 2002ರ ಮತದಾರರ ಪಟ್ಟಿಯನ್ನು 2025ರ ಮತದಾರರ ಪಟ್ಟಿಗೆ * ಜೋಡಣೆ ಮಾಡುವುದು. 2002ರ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ನೋಂದಣಿಯಾಗದಿದ್ದಲ್ಲಿ ಅವರ ತಂದೆ / ತಾಯಿ / ಅಜ್ಜ/ ಅಜ್ಜಿಯವರ ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯೊಂದಿಗೆ ಜೋಡಣೆ ಮಾಡಿಕೊಳ್ಳಬೇಕು.
2002ರ ಮತದಾರರಾಗಿದ್ದಲ್ಲಿ ನೀವು 2002ರಲ್ಲಿ ವಾಸವಿದ್ದಂತಹ ವಿಧಾನಸಭಾ ಕ್ಷೇತ್ರ ಹೆಸರು / ಸಂಖ್ಯೆ, ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯನ್ನು ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಗೆ ನೀಡಿ ಸಹಕರಿಸಬೇಕು ಎಂದಿದ್ದಾರೆ.
ಒಂದು ವೇಳೆ ನೀವು 2002ರಲ್ಲಿ ಮತದಾರರಾಗಿ ಇಲ್ಲದಿದ್ದಲ್ಲಿ ನಿಮ್ಮ ತಂದೆ / ತಾಯಿ / ಅಜ್ಜ /ಅಜ್ಜಿಯವರು ವಾಸವಿದ್ದಂತಹ ವಿಧಾನ ಸಭಾ ಕ್ಷೇತ್ರದ ಹೆಸರು / ಸಂಖ್ಯೆ, ಭಾಗ ಸಂಖ್ಯೆ, ಹಾಗೂ ಕ್ರಮ ಸಂಖ್ಯೆಯನ್ನು ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಗೆ ಮಾಹಿತಿ ನೀಡಬೇಕು. 2002ರ ಮತದಾರರ https://ceo.karnataka.gov.in/search/en ಮೂಲಕ ಹುಡುಕಬಹುದು. ಸಾರ್ವಜನಿಕರು ಮ್ಯಾಪಿಂಗ್ ಕಾರ್ಯವನ್ನು ಪೂರ್ಣಗೊಳಿಸಲು ಸಹಕರಿಸಬೇಕು ಎಂದು ಅವರು ತಿಳಿಸಿದ್ದಾರೆ.





