ಮಹಿಳಾ ಅಧ್ಯಕ್ಷೆಯಾಗಿ ಅವಧಿ ಪೂರ್ಣಗೊಳಿಸಿರುವುದು ಹೆಮ್ಮೆ ತಂದಿದೆ: ಮಲ್ಲಿಕಾ ಹೆಗ್ಡೆ
ವೇಣೂರು: ವೇಣೂರು ಗ್ರಾಮ ಪಂಚಾಯತ್ನ ೨೦೨೬-೨೭ನೇ ಸಾಲಿನ ಪ್ರಥಮಸುತ್ತಿನ ಗ್ರಾಮಸಭೆಯು ವೇಣೂರು ಬಸ್ ನಿಲ್ದಾಣದ ಪಂಚಾಯತ್ ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷೆಯಾಗಿರುವ ಶ್ರೀಮತಿ ಮಲ್ಲಿಕಾ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಜರಗಿತು.


ನೋಡೆಲ್ ಅಧಿಕಾರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಜೋಸೆಫ್ ಅವರು ಸಭೆಯನ್ನು ನಡೆಸಿಕೊಟ್ಟರು.
ಗ್ರಾಮ ಪಂಚಾಯತು ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ಹೆಗ್ಡೆ ಅವರು ಮಾತನಾಡಿ, ಸೆ. 28ಕ್ಕೆ ನಮ್ಮ ಆಡಳಿತ ಅವಧಿ ಪೂರ್ಣಗೊಳ್ಳಲಿದೆ. ನನ್ನ ಅವಧಿಯ ಎರಡು ವರ್ಷ ಮೂರು ತಿಂಗಳಲ್ಲಿ ಯಾರಿಗೂ ತೊಂದರೆ ಆಗಿಲ್ಲ ಅನ್ನುವ ಭಾವನೆ ನನ್ನದು. ಮಹಿಳಾ ಅಧ್ಯಕ್ಷೆಯಾಗಿ ಅವಧಿ ಪೂರ್ಣಗೊಳಿಸಿರುವುದು ಹೆಮ್ಮೆ ತಂದಿದೆ. ಗರಿಷ್ಠ ಪ್ರಮಾಣದಲ್ಲಿ ತಾರತಮ್ಯ ಮಾಡದೆ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ, ನನ್ನ ಅವಧಿಯಲ್ಲಿ ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದರು.
ವೇಣೂರು ಪರಿಸರದ ಜನ ಅನಿವಾರ್ಯವಾಗಿ ಖಾಸಗಿ ಶಾಲೆಗಳನ್ನು ಇಲ್ಲವೇ ದೂರದ ಸರಕಾರಿ ಶಾಲೆಗಳನ್ನೇ ಆಶ್ರಯಿಸಬೇಕಿದೆ. ವೇಣೂರು ಸರಕಾರಿ ಪ್ರೌಢಶಾಲೆಯ ಹಳೆಯ ಕಟ್ಟಡ ಸಿದ್ದವಿದ್ದು, ವೇಣೂರು ನಗರದಲ್ಲಿ ಸರಕಾರಿ ಪ್ರಾಥಮಿಕ ಶಾಲೆಗೆ ಅನುಮತಿ ನೀಡಿ ಎಂದು ಗ್ರಾಮಸ್ಥರು ಮಹತ್ವದ ಬೇಡಿಕೆ ಇರಿಸಿದ್ದಾರೆ.
ವೇಣೂರಿಗೆ ಸರಕಾರಿ ಪ್ರಾಥಮಿಕ ಶಾಲೆಗೆ ಅನುಮತಿ
ತಾ.ಪಂ. ಮಾಜಿ ಸದಸ್ಯ ಕೆ. ವಿಜಯ ಗೌಡ ಅವರು ವಿಷಯ ಪ್ರಸ್ತಾಪಿಸಿ, ವೇಣೂರು ಪರಿಸರದಲ್ಲಿ ಪ್ರಸ್ತುತ ಸರಕಾರಿ ಪ್ರಾಥಮಿಕ ಶಾಲೆಯಿಲ್ಲ. ವೇಣೂರು ಸರಕಾರಿ ಪ್ರೌಢಶಾಲೆಯ ಹಳೆಯ ಕಟ್ಟಡದ ಹಲವು ಕೊಠಡಿಗಳು ಉತ್ತಮ ರೀತಿಯಲ್ಲಿದ್ದು, ಅದರಲ್ಲಿ ಶಾಲೆ ನಡೆಸಲು ಅವಕಾಶ ಇದೆ. ಸರಕಾರದ ಮಟ್ಟದಲ್ಲಿ ಅನುಮತಿ ದೊರೆಯುವಂತೆ ಮಾಡಲು ನಿರ್ಣಯ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಅಧಿಕ ಬಾರದ ಲಾರಿಗಳ ಸಂಚಾರವನ್ನು ನಿಯಂತ್ರಿಸಿ
ರಾಜ್ಯ ಹೆದ್ದಾರಿಯಲ್ಲಿ ಅಧಿಕ ಬಾರದ ಲಾರಿಗಳು ಸಂಚರಿಸುತ್ತಿದ್ದು, ಹೆದ್ದಾರಿ ಹಾಗೂ ಸೇತುವೆಗೂ ಅಪಾಯ ತಂದೊಡ್ಡಿದೆ. ಇದಕ್ಕೆ ಸಂಬಂಧಿತ ಇಲಾಖೆ, ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಊರವರಿಂದ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ವಿಜಯ ಗೌಡ ಎಚ್ಚರಿಕೆ ನೀಡಿದರು.
ಈ ಬಗ್ಗೆ ಆರ್ಟಿಒ, ಪೊಲೀಸ್, ಗಣಿ ಇಲಾಖೆಯ ಗಮನಕ್ಕೆ ತರುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ವೇಣೂರು ವಿದ್ಯಾರ್ಥಿನಿ ವಸತಿ ನಿಲಯದ ಅವ್ಯವಸ್ಥೆಯ ಬಗ್ಗೆ ವಿಜಯ ಗೌಡ ಅವರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯ ಗಮನಕ್ಕೆ ತಂದರು. ವಿದ್ಯಾರ್ಥಿನಿಯರಿಗೆ ಮೂಲ ಸೌಲಭ್ಯಗಳೇ ಇಲ್ಲ, ಇದ್ದ ಬೆಡ್ಗಳು ಮಾಯವಾಗಿದೆ ಎಂದವರು ಅಧಿಕಾರಿಯ ಗಮನಕ್ಕೆ ತಂದರು.
ಶೀಘ್ರ ಗಡಿಗುರುತು ಮಾಡಿ
ಗ್ರಾಮ ಪಂಚಾಯತು ಸದಸ್ಯ ಅನೂಪ್ ಜೆ. ಪಾಯಸ್ ಅವರು ಮೂಡುಕೋಡಿಯ ಕೊಪ್ಪದಬಾಕಿಮಾರುವಿನಲ್ಲಿ ಈಗಾಗಲೇ ೭೦ ಸೆಂಟ್ಸ್ ಅಂಬೇಡ್ಕರ್ ಭವನಕ್ಕೆ ನಿವೇಶನ ಕಾಯ್ದಿರಿಸಿ ಆರ್ಟಿಸಿ ಆಗಿದೆ. ೫೦ ಸೆಂಟ್ಸ್ ಬ್ರಹ್ಮಶ್ರೀ ನಾರಾಯಣ ಗುರು ವೈದಿಕ ಪೀಠಕ್ಕೆ ನಿವೇಶನ ಕಾಯ್ದಿರಿಸಲಾಗಿದೆ. ಉಳಿದ ನಿವೇಶನವನ್ನು ಆಟದ ಮೈದಾನಕ್ಕೆ ಕಾದಿರಿಸಿದ್ದೇವೆ. ಇದರ ಗಡಿಗುರುತು ಮಾಡಲು ಪ್ರಕ್ರಿಯೆಗೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮೊಟ್ಟೆಗೆ ಸ್ವಂತ ಶಿಕ್ಷಕರ ಹಣ ಬಳಕೆ
ಶಾಲೆಗಳಿಗೆ ಇಲಾಖೆಯಿಂದ ಬರುವ ಮೊಟ್ಟೆಗಳ ಅನುದಾನವನ್ನು ಪ್ರಸ್ತುತ ಮೊಟ್ಟೆದರಕ್ಕೆ ಸಾಕಾಗುವುದಿಲ್ಲ, ಶಿಕ್ಷಕರೇ ಪ್ರತೀ ತಿಂಗಳಿಗೆ ಸಾವಿರಾರು ರೂಪಾಯಿ ಸ್ವಂತ ಹಣ ಬಳಕೆ ಮಾಡುತ್ತಿದ್ದಾರೆ. ಇಲಾಖೆ ಮೊಟ್ಟೆಗೆ ನೀಡುವ ದರವನ್ನು ಹೆಚ್ಚು ಮಾಡಬೇಕು ಎಂದು ವೇಣೂರು ಸರಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಾಜೇಶ್ ಪೂಜಾರಿ ಮೂಡುಕೋಡಿ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಇಲಾಖೆ ಅಧಿಕಾರಿ ಇದು ಸರಕಾರದ ಮಟ್ಟದಲ್ಲಿ ನಿರ್ಧಾರವಾಗುವುದು, ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಶಾಲೆಗೆ ಬೀಗ ಹಾಕಿ ರಜೆಯಲ್ಲಿ ತೆರಳಿದ ಶಿಕ್ಷಕಿ?!
ಹೊಸಪಟ್ಣ ಸರಕಾರಿ ಕಿ.ಪ್ರಾ. ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದು, ಇದ್ದ ಓರ್ವ ಶಿಕ್ಷಕಿಯೂ ಶಾಲೆಗೆ ಬೀಗ ಹಾಕಿ ರಜೆಯ ಮೇಲೆ ತೆರಳಿರುವ ಶಾಕಿಂಗ್ ವಿಚಾರ ಸಭೆಯಲ್ಲಿ ಬಯಲಾಯಿತು. ಶಿಕ್ಷಕಿಗೆ ರಜೆ ಮಂಜೂರು ಮಾಡಿ ಎಡವಟ್ಟು ಮಾಡಿಕೊಂಡಿದ್ದ ಇಲಾಖೆ ಬಳಿಕ ರಜೆಯನ್ನು ರದ್ದು ಮಾಡಿದೆ. ಇದೀಗ ಶಿಕ್ಷಕಿಗೆ ನೊಟೀಸು ಜಾರಿ ಮಾಡಿರುವುದಾಗಿ ಸಭೆಯಲ್ಲಿದ್ದ ಅಧಿಕಾರಿ ಮಾಹಿತಿ ನೀಡಿದರು.
ವೇಣೂರು ಅಜಿಲಕೆರೆಯ ಒತ್ತುವರಿ ಬಗ್ಗೆ, ಹಿಂದೂ ರುದ್ರಭೂಮಿ ನಿರ್ಮಾಣದ ಬಗ್ಗೆ, ಬೀದಿ ನಾಯಿಗಳ ಸಮಸ್ಯೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ವೇಣೂರು ಕಾಂಜರಕಟ್ಟದ ಬಳಿಯೂ ನಡೆದ ಕೆರೆ ಒತ್ತುವರಿ ಬಗ್ಗೆ ಚರ್ಚೆ ನಡೆಯಿತು. ಗ್ರಾಮಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಉಮೇಶ್ ನಡ್ತಿಕಲ್ಲು ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
ಗ್ರಾಮ ಪಂಚಾಯತ್ ಕಾರ್ಯದರ್ಶಿ ವರದಿ ಮಂಡಿಸಿದರು. ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಅವರು ಸಭೆಯನ್ನು ನಿರ್ವಹಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ಸಭೆಗೆ ಗೈರಾಗಿದ್ದರು. ಸಭೆಯಲ್ಲಿ ಗ್ರಾ.ಪಂ. ಸದಸ್ಯರು, ವಿವಿಧ ಇಲಾಖಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾ.ಪಂ. ಉಪಾಧ್ಯಕ್ಷ ಉಮೇಶ್ ನಡ್ತಿಕಲ್ಲು ಅವರ ಅನುಪಸ್ಥಿತಿ ಸಭೆಯಲ್ಲಿ ಎದ್ದುಕಾಣುತ್ತಿತ್ತು.
ಪ್ರಯುಖ ಬೇಡಿಕೆಗಳು
ವೇಣೂರು ವಿದ್ಯಾರ್ಥಿನಿ ನಿಲಯವನ್ನು ಅಭಿವೃದ್ಧಿ ಪಡಿಸಿ ಮೇಲ್ದರ್ಜೆಗೇರಿಸಬೇಕು,
ಬೀದಿ ದೀಪಗಳಿಗೆ ಕನಿಷ್ಠ 100 ವಾಲ್ಟಿನ ಬಲ್ಬುಗಳನ್ನು ಬಳಸಬೇಕು
ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ನೇಮಕವಾಗಬೇಕು,
ವೇಣೂರಿಗೆ ಸಮುದಾಯ ಭವನ ಹಾಗೂ ಅಂಬೇಡ್ಕರ್ ಭವನದ ನಿರ್ಮಾಣ ಆಗಬೇಕು
ಪಾಲು ಬಿದ್ದಿರುವ ಪಶುಸಂಗೋಪನ ಇಲಾಖೆಯ ಹಳೆ ಕಟ್ಟಡ ದುರಸ್ತಿ ಕಾರ್ಯ ಆಗಬೇಕು
ವೇಣೂರು ಫಲ್ಗುಣಿ ನದಿಯಿಂದ ಬಡವರಿಗೆ ಮರಳು ತೆಗೆಯಲು ಪಂಚಾಯತ್ ಮಟ್ಟದಲ್ಲಿ ಅನುಮತಿ ಸಿಗುವಂತಾಗಬೇಕು



