ಮೈಸೂರು: ಆಟಿಕೆ ಆಸೆಗೆ ಬಿದ್ದು ಮೂರು ವರ್ಷದ ಮುದ್ದು ಕಂದಮ್ಮನೊಬ್ಬ ಪ್ಲಾಸ್ಟಿಕ್ ಬಾಲ್ ನುಂಗಿ ದಾರುಣವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ಸಂಭವಿಸಿದೆ.

ಗೌರಿಪುರ ಗ್ರಾಮದ ನಿವಾಸಿಗಳಾದ ಸಂತೋಷ್ ಮತ್ತು ಐಶ್ವರ್ಯ ದಂಪತಿಯ ಮೂರು ವರ್ಷದ ಏಕೈಕ ಪುತ್ರ ಮುಕುಂದ್ ಮಯೂರ್ ಸಾವನ್ನಪ್ಪಿದ ದುರದೃಷ್ಟಕರ ಮಗುವಾಗಿದ್ದಾನೆ. ಶನಿವಾರ ಮಗು ನಿರಂತರವಾಗಿ ಅಳುತ್ತಿದ್ದುದ್ದನ್ನು ಕಂಡು, ಸಂಬಂಧಿಕರ ಮಕ್ಕಳು ಗೌರಿಪುರದ ಸ್ಥಳೀಯ ಅಂಗಡಿಯೊಂದರಲ್ಲಿ ಚಿಪ್ಸ್ ಪ್ಯಾಕೆಟ್ ಕೊಡ್ಸಿದ್ದರು.
ಸಾಮಾನ್ಯವಾಗಿ ಮಕ್ಕಳನ್ನು ಆಕರ್ಷಿಸಲು ಈ ರೀತಿಯ ತಿಂಡಿ ಪ್ಯಾಕೆಟ್ಗಳ ಒಳಗೆ ಸಣ್ಣಪುಟ್ಟ ಪ್ಲಾಸ್ಟಿಕ್ ಆಟಿಕೆಗಳನ್ನು ಇಡಲಾಗುತ್ತದೆ. ಅದೇ ರೀತಿ ಈ ಚಿಪ್ಸ್ ಪ್ಯಾಕೆಟ್ನಲ್ಲಿದ್ದ ಸಣ್ಣ ಪ್ಲಾಸ್ಟಿಕ್ ಬಾಲ್ ಅನ್ನು ಮುಕುಂದ್, ತಿಂಡಿಯ ಜೊತೆ ತಿಂದಿದ್ದು, ಅದು ನೇರವಾಗಿ ಮಗುವಿನ ಗಂಟಲಿಗೆ ಸಿಲುಕಿಕೊಂಡಿದೆ. ಇದರಿಂದಾಗಿ ಮಗುವಿಗೆ ಉಸಿರಾಡಲು ತೊಂದರೆಯಾಗಿ ತೀವ್ರವಾಗಿ ಒದ್ದಾಡಲು ಪ್ರಾರಂಭಿಸಿದೆ.
ಮಗು ಒದ್ದಾಡುತ್ತಿರುವುದನ್ನು ಗಮನಿಸಿದ ಪೋಷಕರು ಮತ್ತು ಕುಟುಂಬಸ್ಥರು ಗಾಬರಿಗೊಂಡು, ತಕ್ಷಣವೇ ಹುಣಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ, ಗಂಟಲಿನಲ್ಲಿ ಬಾಲ್ ಬಿಗಿಯಾಗಿ ಸಿಲುಕಿಕೊಂಡಿದ್ದರಿಂದ ಮಾರ್ಗಮಧ್ಯದಲ್ಲೇ ಮಗು ಉಸಿರುಗಟ್ಟಿ ಕೊನೆಯುಸಿರೆಳೆದಿದೆ.
ಏಕೈಕ ಮಗನನ್ನು ಕಳೆದುಕೊಂಡ ದಂಪತಿಯ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗೌರಿಪುರ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ. ಮಕ್ಕಳ ತಿಂಡಿ ಪ್ಯಾಕೆಟ್ಗಳಲ್ಲಿ ಇಡುವ ಇಂತಹ ಅಪಾಯಕಾರಿ ಪ್ಲಾಸ್ಟಿಕ್ ಆಟಿಕೆಗಳ ಬಗ್ಗೆ ಪೋಷಕರು ತೀವ್ರ ಎಚ್ಚರ ವಹಿಸಬೇಕಾದ ಅಗತ್ಯವನ್ನು ಈ ದುರಂತ ನೆನಪಿಸಿದೆ.



