ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ, ಪಕ್ಷದಿಂದಲೂ ಅಮಾನತು
ಬೆಂಗಳೂರು ಜ.23: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜೀವ್ ಗೌಡನನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಿದೆ.
ಇಂದು (ಜನವರಿ 23) ನಡೆದ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜೀವ್ ಗೌಡ ಶಿಡ್ಲಘಟ್ಟ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಬಂದಿರುವ ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದೆ. ಪ್ರಕರಣದ ಗಂಭೀರತೆ ಮನವರಿಕೆಯಾದ ಹಿನ್ನಲೆಯಲ್ಲಿ ಕೆಪಿಸಿಸಿ ಶಿಸ್ತುಪಾಲನಾ ಸಮಿತಿಯ ಶಿಫಾರಸ್ಸಿನ ಮೇರೆಗೆ ರಾಜೀವ್ ಗೌಡ ಅವರನ್ನು ಪಕ್ಷದಿಂದ ಸಸ್ಪೆಂಡ್ ಮಾಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಖಡಕ್ ಮಾತು
ಈ ಬಗ್ಗೆ ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಎಂ.ಸಿ ಸುಧಾಕರ್ ಮಾತನಾಡಿದ್ದು, ಜನವರಿ 12ರಂದು ಸಂಜೆ ನಡೆದ ದೂರವಾಣಿ ಸಂಭಾಷಣೆಯಿಂದ ಅಧಿಕಾರಿಗಳಲ್ಲಿ ಆತಂಕ ಉಂಟಾಗಿತ್ತು. ಅವರು ದೂರು ಕೊಟ್ಟ ತಕ್ಷಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಅವರ ಮೇಲೆ ದೂರು ಕೂಡ ದಾಖಲಾಗಿದೆ. ಈಗ ಉತ್ತರ ಕೊಡದ ಕಾರಣ ಪಕ್ಷದಿಂದ ಅಮಾನತು ಮಾಡಲಾಗಿದೆ. ಅಧಿಕಾರಿಗಳ ಗೌರವ ಉಳಿಸುವ ಕಾರ್ಯ ನಾವು ಮಾಡಿದ್ದೇವೆ. ಅವರು ತಲೆ ಮರೆಸಿಕೊಂಡಿದ್ದಾರೆ. ಅವರನ್ನು ಬಂಧಿಸುವ ಕೆಲಸ ಆಗುತ್ತದೆ. ಮುನಿಯಪ್ಪ ಅವರಿಗೆ ಆತ್ಮೀಯತೆ ಇರಬಹುದು. ಆದ್ರೆ ಆಡಿಯೋ ಕೇಳಿದ್ರೆ ನಾಗರಿಕ ಸಮಾಜ ಮೆಚ್ಚುವಂತದಲ್ಲ. ಆತ್ಮೀಯತೆ ಇದೆ ಎಂದರೆ ಅವರ ಪರವಾಗಿ ಮುನಿಯಪ್ಪ ಇದಾರೆ ಅಂತಲ್ಲ. ಸಿಎಂ, ಡಿಸಿಎಂ, ಗೃಹ ಸಚಿವರು ಸೂಚನೆ ಕೊಟ್ಟಿದ್ದಾರೆ. ಕೂಡಲೇ ಅವರನ್ನು ಬಂಧಿಸುವ ಕೆಲಸ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.
ಬ್ಯಾನರ್ ವಿಚಾರಕ್ಕೆ ಮಹಿಳಾ ಅಧಿಕಾರಿಗೆ ಕರೆ ಮಾಡಿ ಬಾಯಿಗೆ ಬಂದಂತೆ ಬೈದು ಧಮ್ಕಿ ಹಾಕಿದ್ದು, ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಈ ಪ್ರಕರಣ ಇಟ್ಟುಕೊಂಡು ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಅಸ್ತ್ರವನ್ನಾಗಿ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ವಿರುದ್ಧ ಟೀಕೆಗಳನ್ನು ಮಾಡುತ್ತಿವೆ. ಹೀಗಾಗಿ ಪಕ್ಷಕ್ಕೆ ಮಜುಗರವಾಗಿರುವುದಿರಂದ ಕಾಂಗ್ರೆಸ್ ಈ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ.





