ಬೆಳ್ತಂಗಡಿ, ಸೆ.12: ಹೆಬ್ಬಾವನ್ನು ನುಂಗಿದ್ದ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಕಡಿಂಗ ನಿವಾಸಿ ಹಿತೇಶ್ ಅವರ ಮನೆಯ ತೋಟದಲ್ಲಿ ಸುರಕ್ಷಿತವಾಗಿ ರಕ್ಷಿಸಿ, ಬಳಿಕ ಅರಣ್ಯಕ್ಕೆ ಬಿಡಲಾಯಿತು.


ಸೆಪ್ಟೆಂಬರ್ 11ರ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ಹಿತೇಶ್ ಅವರ ಕುಟುಂಬದವರು ಮನೆಯ ತೋಟದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಗಮನಿಸಿದ್ದು, ತಕ್ಷಣ ಲಾಯಿಲದ ಉರಗ ರಕ್ಷಕ ಸ್ನೇಕ್ ಅಶೋಕ್ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಶೋಕ್ ಪರಿಸ್ಥಿತಿಯನ್ನು ಪರಿಶೀಲಿಸಿ, ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ರಕ್ಷಣಾ ಕಾರ್ಯಾಚರಣೆ ವೇಳೆ ಕಾಳಿಂಗ ಸರ್ಪವು ತಾನು ನುಂಗಿದ್ದ ಹೆಬ್ಬಾವನ್ನು ಹೊರಗೆ ಕಕ್ಕಿದೆ. ಬಳಿಕ ಕಾಳಿಂಗ ಸರ್ಪವನ್ನು ಯಾವುದೇ ಅಪಾಯವಾಗದಂತೆ ಸುರಕ್ಷಿತವಾಗಿ ಹಿಡಿದು, ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಬಿಡಲಾಯಿತು.



