ಬೆಂಗಳೂರಿನ ಬೆನ್ನಲ್ಲೇ ಮಂಗಳೂರಿನಲ್ಲೂ ಇಂಡಿಗೋ ವಿಮಾನದಲ್ಲಿ ಟೇಕಾಫ್ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. 229 ಪ್ರಯಾಣಿಕರು, 7 ಸಿಬ್ಬಂದಿ ಇದ್ದ ವಿಮಾನದ ಚಕ್ರದಲ್ಲಿ ದೋಷ ಕಾಣಿಸಿಕೊಂಡಿದ್ದು, ಪೈಲಟ್ ಸಮಯಪ್ರಜ್ಞೆ ಮೆರೆದು ವಿಮಾನವನ್ನು ರನ್ವೇನಲ್ಲೇ ನಿಲ್ಲಿಸಿ ಸಂಭವಿಸಬಹುದಾಗಿದ್ದ ದುರಂತವನ್ನು ತಪ್ಪಿಸಿದ್ದಾರೆ. ಒಂದೇ ದಿನ ರಾಜ್ಯದಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷದ 2 ಘಟನೆಗಳು ವರದಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.




229 ಪ್ರಯಾಣಿಕರು, 7 ಸಿಬ್ಬಂದಿ ಇದ್ದ ವಿಮಾನ
229 ಪ್ರಯಾಣಿಕರು ಮತ್ತು ಏಳು ಮಂದಿ ಸಿಬ್ಬಂದಿ ಇದ್ದ ವಿಮಾನ ಸಂಜೆ 6.10ರ ಸುಮಾರಿಗೆ ಟೇಕಾಫ್ಗೆ ಸಿದ್ಧವಾಗಿತ್ತು. ರನ್ವೇನಲ್ಲಿ ವೇಗವಾಗಿ ಸಾಗುತ್ತಿದ್ದ ವಿಮಾನ ಟೇಕಾಫ್ ಆಗಲು ಸುಮಾರು 100 ಮೀಟರ್ ಅಂತರ ಬಾಕಿ ಇರುವಾಗ ಅದರ ಕೆಳಭಾಗದಲ್ಲಿ ಬೆಂಕಿಯ ಕಿಡಿಯೊಂದಿಗೆ ಸ್ಪಾರ್ಕ್ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಪೈಲಟ್ ತಕ್ಷಣವೇ ವಿಮಾನದ ವೇಗವನ್ನು ಕಡಿಮೆ ಮಾಡಿ ರನ್ವೇನಲ್ಲೇ ನಿಲ್ಲಿಸಿದ್ದಾರೆ. ವಿಮಾನದ ಚಕ್ರವೊಂದರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದಾಗಿ ತಿಳಿದುಬಂದಿದೆ. ಪೈಲಟ್ ಸಕಾಲದಲ್ಲಿ ವಿಮಾನವನ್ನು ನಿಲ್ಲಿಸಿದ್ದರಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

