ಬೆಂಗಳೂರು: ಜನಪ್ರತಿನಿಧಿಯಾಗಿ ಹೇಗೆ ಮಾತನಾಡಬೇಕು ಎಂಬ ಕನಿಷ್ಠ ಪರಿಜ್ಞಾನವೂ ಇಲ್ಲದೆ ಶಾಲಾ ಮಕ್ಕಳ ಮುಂದೆ ದ್ವೇಷಪೂರಿತ ಹಾಗೂ ಅಸಂವಿಧಾನಿಕ ಮಾತುಗಳನ್ನಾಡಿರುವುದು ಸರಿಯಲ್ಲ. ಮಕ್ಕಳಲ್ಲಿ ಕೆಟ್ಟ ವಿಚಾರಗಳನ್ನು ಬಿತ್ತುವುದೇ ಬಿಜೆಪಿ ನಾಯಕರ ಚಾಳಿಯಾಗಿದೆ ಎಂದು ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಮಧು ಬಂಗಾರಪ್ಪ ತೀವ್ರ ವಾಗ್ದಾಳಿ ನಡೆಸಿದರು.




ಬೆಳ್ತಂಗಡಿ ಶಾಸಕರಾಗಿರುವ ಹರೀಶ್ ಪೂಂಜಾ ಬೆಳ್ತಂಗಡಿ ತಾಲ್ಲೂಕಿನ ಪುಂಜಾಲಕಟ್ಟೆಯ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್)ಯ ನೂತನ ಸಭಾಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷದ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿದ್ದರಲ್ಲದೆ, ದ್ವೇಷದ ಭಾಷಣ ಮಾಡಿದ್ದರು ಎಂಬ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಸಚಿವ ಮಧು ಬಂಗಾರಪ್ಪ ತೀಕ್ಷ್ಣ ಪ್ರತಿಕ್ರಿಯಿಸಿದ್ದಾರೆ. ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳೂವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಾಜಕಾರಣವನ್ನು ರಾಜಕೀಯ ವೇದಿಕೆಗಳಿಗೆ ಸೀಮಿತಗೊಳಿಸಬೇಕು. ಶಾಲೆಗಳಲ್ಲಿ ಈ ರೀತಿ ಮಾತನಾಡುವುದು ಸರಿಯಲ್ಲ. ಶಾಸಕರಿಗೆ ಕನಿಷ್ಠ ಸಾಮಾನ್ಯ ತಿಳುವಳಿಕೆ ಇರಬೇಕಲ್ಲವೇ? ಅವರ ಮನಸ್ಸಿನಲ್ಲಿ ವಿಷವಿದ್ದರೆ ಅದನ್ನೇ ಹೊರಹಾಕುತ್ತಾರೆ. ಈ ವಿಚಾರವನ್ನು ನಾವು ಸುಮ್ಮನೆ ಬಿಡುವುದಿಲ್ಲ. ಶಾಸಕರು ಏನು ಮಾತನಾಡಿದ್ದಾರೆ ಎಂಬ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ವರದಿಯ ಆಧಾರದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ದೂರು ನೀಡಲು ಮುಂದೆ ಬಂದರೂ ಸ್ವಾಗತಿಸುತ್ತೇವೆ. ಆದರೆ, ದೂರುಗಳಿಗಾಗಿ ಕಾಯದೆ ಇಲಾಖೆಯಿಂದಲೇ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ವಿದ್ಯಾಸಂಸ್ಥೆಗಳಲ್ಲಿ ರಾಜಕೀಯಕ್ಕೆ ಅವಕಾಶ ಇಲ್ಲ
ಶಾಲೆಗಳು ದೇವಸ್ಥಾನಗಳಿದ್ದಂತೆ. ಅಂತಹ ಪವಿತ್ರ ಸ್ಥಳದಲ್ಲಿ ರಾಜಕೀಯ ಮಾತನಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ ಸಚಿವರು, ರಾಜಕಾರಣಕ್ಕಾಗಿ ಈಗಾಗಲೇ ದೇವಸ್ಥಾನಗಳನ್ನು ಬಳಸಿಕೊಂಡಿರುವವರು ಇದೀಗ ಶಾಲೆಗಳಿಗೂ ನೇರವಾಗಿ ಪ್ರವೇಶಿಸುತ್ತಿದ್ದಾರೆ. ಜನರು ಇಂತಹ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಶಿಕ್ಷಣ ಸಚಿವನಾಗಿ ಈ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಅವರು ಕ್ಷಮೆ ಕೇಳುತ್ತಾರೋ ಇಲ್ಲವೋ ಎಂಬುದು ಮುಖ್ಯವಲ್ಲ. ಕಾನೂನು ಪ್ರಕಾರ ಕೈಗೊಳ್ಳಬೇಕಾದ ಕ್ರಮವನ್ನು ಖಂಡಿತ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು. ಬಿಜೆಪಿಯಿಂದ ರಾಜ್ಯದಲ್ಲಿ ದ್ವೇಷದ ರಾಜಕಾರಣ ಕಾಂಗ್ರೆಸ್ ನಾಯಕರ ಫೋನ್ ಕದ್ದಾಲಿಕೆ ಕುರಿತು ಕೇಳಲಾದ ಪ್ರಶ್ನೆಗೆ ಸಚಿವರು, ಐಟಿ ಮತ್ತು ಇ.ಡಿ. ಸಂಸ್ಥೆಗಳನ್ನು ಬಳಸಿಕೊಂಡು ಎಷ್ಟು ಕಾಂಗ್ರೆಸ್ ನಾಯಕರ ಮೇಲೆ ದಾಳಿ ನಡೆಸಲಾಗಿದೆ? ಬಿಜೆಪಿ ನಾಯಕರ ವಿರುದ್ಧ ಎಷ್ಟು ಕ್ರಮ ಕೈಗೊಳ್ಳಲಾಗಿದೆ? ಎಂದು ಪ್ರಶ್ನಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಿಜೆಪಿ ಹಾಳು ಮಾಡುತ್ತಿರುವಷ್ಟು ಬೇರೆ ಯಾರೂ ಮಾಡಿಲ್ಲ. ಮಕ್ಕಳ ಮುಂದೆ ಶಾಸಕ ಹರೀಶ್ ಪೂಂಜಾ ಮಾತನಾಡುವ ಅಗತ್ಯವೇನಿತ್ತು? ಮಕ್ಕಳ ಮನಸ್ಸಿನಲ್ಲಿಯೂ ದ್ವೇಷದ ಬೀಜ ಬಿತ್ತುವ ಉದ್ದೇಶ ಅವರದ್ದಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನವೇ ಬಿಜೆಪಿ ಜಾರಿಗೆ ತಂದಿದ್ದ ದ್ವೇಷಪೂರಿತ ಪಠ್ಯಗಳನ್ನು ತೆಗೆದುಹಾಕುವುದಾಗಿ ಭರವಸೆ ನೀಡಿತ್ತು. ಅದರಂತೆ ಶಿಕ್ಷಣ ಸಚಿವನಾಗಿ ಪಠ್ಯಪುಸ್ತಕ ಪರಿಷ್ಕರಣೆ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಕೆಲಸ ಮಾಡಿದ್ದೇವೆ ಎಂದು ವಿವರಿಸಿದರು.
