ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ 2-1 ಅಂತರದಿಂದ ಟಿ20 ಸರಣಿ ಗೆದ್ದು ಬೀಗಿದೆ. ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಂಡ ಭಾರತ, ಬ್ರಿಸ್ಬೇನ್ನಲ್ಲಿ ಮಳೆಯಿಂದ ಅಂತಿಮ ಪಂದ್ಯ ರದ್ದುಗೊಂಡಿದ್ದರೂ, ಐದನೇ ಸತತ ಟಿ20 ಸರಣಿ ಗೆಲುವನ್ನು ಆಸ್ಟ್ರೇಲಿಯಾದಲ್ಲಿ ದಾಖಲಿಸಿದೆ.
ಆಸ್ಟ್ರೇಲಿಯಾ ಪ್ರವಾಸವನ್ನು ಏಕದಿನ ಸರಣಿ ಸೋಲಿನೊಂದಿಗೆ ಆರಂಭಿಸಿದ್ದ ಟೀಂ ಇಂಡಿಯಾ ಇದೀಗ ಟಿ20 ಸರಣಿಯನ್ನು ಗೆಲ್ಲುವ ಮೂಲಕ ಶುಭಾಂತ್ಯ ಹಾಡಿದೆ. ಉಭಯ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯನ್ನು ಭಾರತ ತಂಡ 2-1 ಅಂತರದಿಂದ ಗೆದ್ದುಕೊಳ್ಳುವ ಮೂಲಕ ಏಕದಿನ ಸರಣಿ ಸೋಲಿಗೆ ಸೇಡನ್ನು ತೀರಿಸಿಕೊಂಡಿತು. ಬ್ರಿಸ್ಬೇನ್ನಲ್ಲಿ ನಡೆದ ಸರಣಿಯ ಅಂತಿಮ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಹೀಗಾಗಿ ಕೊನೆಯ ಪಂದ್ಯವನ್ನು ಗೆದ್ದು ಟಿ20 ಸರಣಿಯನ್ನು ಡ್ರಾ ಮಾಡಿಕೊಳ್ಳುವ ಇರಾದೆಯಲಿದ್ದ ಆಸ್ಟ್ರೇಲಿಯಾಕ್ಕೆ ಮಳೆ ಅವಕಾಶ ಮಾಡಿಕೊಡಲಿಲ್ಲ. ಈ ಮೂಲಕ ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಸತತ ಐದನೇ ಟಿ20 ಸರಣಿ ಗೆದ್ದ ದಾಖಲೆಯನ್ನೂ ಬರೆಯಿತು.
ಅಭಿಷೇಕ್ಗೆ ಆರಂಭದಲ್ಲೇ 2 ಜೀವದಾನ
ನವೆಂಬರ್ 8 ರ ಶನಿವಾರ ಬ್ರಿಸ್ಬೇನ್ನಲ್ಲಿ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿ, ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇತ್ತ ಟೀಂ ಇಂಡಿಯಾ ಪರ ಶುಭ್ಮನ್ ಗಿಲ್ ಹಾಗೂ ಅಭಿಷೇಕ್ ಶರ್ಮಾ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. ಇಬ್ಬರು ಬೌಂಡರಿಗಳ ಮಳೆ ಸುರಿಸಿದರು. ಗಿಲ್ ಒಂದೇ ಓವರ್ನಲ್ಲಿ ನಾಲ್ಕು ಬೌಂಡರಿಗಳನ್ನು ಸಹ ಬಾರಿಸಿದರು. ಈ ಮಧ್ಯೆ, ಅಭಿಷೇಕ್ ಶರ್ಮಾ ಗೆ ಎರಡು ಜೀವದಾನಗಳು ಸಿಕ್ಕವು. ಇದರ ಲಾಭ ಪಡೆದ ಅಭಿಷೇಕ್ ಕೂಡ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮುಂದುವರೆಸಿದ್ದರು.
ಮಳೆಯಿಂದ 5ನೇ ಪಂದ್ಯ ರದ್ದು
ಆದರೆ ಟೀಂ ಇಂಡಿಯಾ 50 ರನ್ಗಳ ಗಡಿ ದಾಟಿದ ತಕ್ಷಣ, ಕೆಟ್ಟ ಹವಾಮಾನದಿಂದಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಬ್ರಿಸ್ಬೇನ್ನಲ್ಲಿ ಮಿಂಚು ಮತ್ತು ಬಿರುಗಾಳಿಯಿಂದಾಗಿ ಎಲ್ಲಾ ಆಟಗಾರರು ಪೆವಿಲಿಯನ್ಗೆ ಮರಳಿದರು. ಆ ಹೊತ್ತಿಗೆ, ಟೀಂ ಇಂಡಿಯಾದ ಸ್ಕೋರ್ 4.5 ಓವರ್ಗಳಲ್ಲಿ 52 ರನ್ಗಳಾಗಿತ್ತು, ಯಾವುದೇ ವಿಕೆಟ್ ಕಳೆದುಕೊಂಡಿಲಿಲ್ಲ. ಆದಾಗ್ಯೂ, ಸ್ವಲ್ಪ ಸಮಯದ ನಂತರ ಮಳೆ ಪ್ರಾರಂಭವಾಯಿತು, ಸುಮಾರು ಎರಡು ಗಂಟೆಗಳ ಕಾಲ ಕಾಯ್ದ ಬಳಿಕ ಅಂಪೈರ್ಗಳು ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು. ಪಂದ್ಯ ನಿಲ್ಲುವ ವೇಳೆಗೆ ಶುಭ್ಮನ್ ಗಿಲ್ 16 ಎಸೆತಗಳಲ್ಲಿ 29 ರನ್ ಮತ್ತು ಅಭಿಷೇಕ್ 13 ಎಸೆತಗಳಲ್ಲಿ 23 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದರು.
ಅಜೇಯ ಓಟ ಮುಂದುವರೆಸಿದ ಭಾರತ
ಇದರೊಂದಿಗೆ ಟೀಂ ಇಂಡಿಯಾ ಐದು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದ್ದು ಮಾತ್ರವಲ್ಲದೆ ಆಸ್ಟ್ರೇಲಿಯಾದಲ್ಲಿ ಸತತ ಐದನೇ ಟಿ20 ಸರಣಿಯನ್ನು ಗೆಲ್ಲುವ ಮೂಲಕ ತನ್ನ ಅಜೇಯ ಓಟದ ದಾಖಲೆಯನ್ನು ಉಳಿಸಿಕೊಂಡಿದೆ. ಇದಲ್ಲದೆ, 2023 ರಿಂದ ಟೀಂ ಇಂಡಿಯಾ ಯಾವುದೇ ಟಿ20ಐ ಸರಣಿಯನ್ನು ಕಳೆದುಕೊಂಡಿಲ್ಲ. ಈ ಗೆಲುವು ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಕೋಚ್ ಗೌತಮ್ ಗಂಭೀರ್ ಅವರಿಗೂ ವಿಶೇಷವಾಗಿದೆ. ಏಕೆಂದರೆ ಎರಡನೇ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದ ಟೀಂ ಇಂಡಿಯಾ, ಆ ಬಳಿಕ ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಮುನ್ನಡೆ ಪಡೆದುಕೊಂಡಿತು. ಇದರ ಫಲವಾಗಿ ಭಾರತಕ್ಕೆ ಟಿ20 ಸರಣಿ ಲಭಿಸಿತು.









