ಮಂಗಳೂರು, ಜು. 20: ಮನೆಯ ಬಾವಿಯೊಂದರಲ್ಲಿ ಯುವಕನ ಮೃತದೇಹ ಪತ್ತೆಯಾದ ಘಟನೆಗೆ ಬಿಗಿ ಟ್ವಿಸ್ಟ್ ಸಿಕ್ಕಿದ್ದು, ಮಲಗಿದ್ದ ತಮ್ಮನ ತಲೆಗೆ ಕಲ್ಲು ಎತ್ತಿ ಹಾಕಿ ಅಣ್ಣನೇ ಕೊಲೆಗೈದಿರುವ ಬಗ್ಗೆ ವರದಿಯಾಗಿದೆ.
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಮಠದ ಬಳಿ ರಾತ್ರಿ ಮಲಗಿದ್ದ ತಮ್ಮನ ತಲೆಗೆ ಕಲ್ಲು ಎತ್ತಿ ಹಾಕಿ ಅಣ್ಣನೇ ಕೊಲೆಗೈದಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಕೊಲೆಯಾದವರನ್ನು ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲೂಕು ತೆಗ್ಯಾಳು ಗ್ರಾಮ ನಿವಾಸಿ ಸದ್ಯ ಚೊಕ್ಕಬೆಟ್ಟು ಮಠದ ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಲ್ಲಿಕಾರ್ಜುನ (20) ಎಂದು ತಿಳಿದು ಬಂದಿದೆ.
ಕೊಲೆಗೈದ ಆರೋಪಿ ಮೃತನ ಅಣ್ಣ ಸೋಮನಾಥ (21) ಎಂದು ತಿಳಿದು ಬಂದಿದೆ. ಈತನ ಜೊತೆಗೆ ನೆರೆ ಮನೆಯ ಮತ್ತೋರ್ವ ಯುವಕನನ್ನೂ ಸುರತ್ಕಲ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.




