ಕಾಸರಗೋಡು: ಸಮುದಾಯ ಸಂಘಟನೆ, ಧಾರ್ಮಿಕ ಚಟುವಟಿಕೆ ಹಾಗೂ ನಿರಂತರ ಸಾಮಾಜಿಕ ಸೇವೆಯ ಮೂಲಕ ಗಡಿನಾಡಿನಲ್ಲಿ ಮಾದರಿಯಾಗಿ ಗುರುತಿಸಿಕೊಂಡಿರುವ ಮಂಜೇಶ್ವರದ ‘ಕಾಸರಗೋಡು ಜಿಲ್ಲಾ ಕುಲಾಲ ಸಂಘ’ಕ್ಕೆ2026-27ನೇ ಸಾಲಿನ ಪ್ರತಿಷ್ಠಿತ ‘ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’ ಲಭಿಸಿದೆ. ಗಡಿನಾಡಿನಲ್ಲಿ ಸಮುದಾಯದ ಏಳಿಗೆಗೆ ಮತ್ತು ಸಮಾಜಮುಖಿ ಕಾರ್ಯಕ್ರಮಗಳಿಗೆ ಶ್ರಮಿಸುತ್ತಿರುವ ಈ ಸಂಸ್ಥೆಯ ಬಹುಮುಖ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.
ಮಂಜೇಶ್ವರ ಭಾಗದಲ್ಲಿ ಸಾಂಸ್ಥಿಕವಾಗಿ ಅತ್ಯಂತ ಬಲವಾದ ನೆಲೆ ಹೊಂದಿರುವ ಕಾಸರಗೋಡು ಜಿಲ್ಲಾ ಕುಲಾಲ ಸಂಘವು, ತೂಮಿನಾಡು ಕುಂಜತ್ತೂರಿನಲ್ಲಿರುವ ತನ್ನ ಸಮುದಾಯ ಭವನವನ್ನು ಕೇಂದ್ರವಾಗಿಟ್ಟುಕೊಂಡು ವೈವಿಧ್ಯಮಯ ಜನಪರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.
ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಪ್ರಧಾನ ಸಮಾರಂಭದಲ್ಲಿ, ಲೋಕಾಯುಕ್ತ ವಿಶೇಷ ಅಭಿಯೋಜಕರೂ ಹಾಗೂ ಸಂಘದ ಗೌರವಾನ್ವಿತ ಅಧ್ಯಕ್ಷರೂ ಆದ ರವೀಂದ್ರ ಮುನ್ನಿಪ್ಪಾಡಿ ಅವರು ಸಂಸ್ಥೆಯ ಪರವಾಗಿ ಹೆಮ್ಮೆಯಿಂದ ಈ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿದರು. ಸಂಘದ ಈ ಸಾಧನೆಗೆ ಗಡಿನಾಡಿನಾದ್ಯಂತ ಹಾಗೂ ಸಮುದಾಯದ ಬಾಂಧವರಿಂದ ವ್ಯಾಪಕ ಮೆಚ್ಚುಗೆ ಮತ್ತು ಅಭಿನಂದನೆಗಳು ವ್ಯಕ್ತವಾಗಿವೆ.


ಗಡಿನಾಡು ಕಾಸರಗೋಡಿನಲ್ಲಿ ಧಾರ್ಮಿಕ, ಸಾಮಾಜಿಕ ಹಾಗೂ ಸಮುದಾಯದ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಕಾಸರಗೋಡು ಜಿಲ್ಲಾ ಕುಲಾಲ ಸಂಘಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದಿರುವುದು ಗಡಿನಾಡ ಕನ್ನಡಿಗರಿಗೆ ಹಾಗೂ ಕುಲಾಲ ಬಂಧುಗಳಿಗೆ ಸಂದ ಅತ್ಯುನ್ನತ ಗೌರವವಾಗಿದೆ. ಈ ಮನ್ನಣೆಯು ಸಂಘದ ಜನಪರ ಸೇವಾ ಕಾರ್ಯಗಳಿಗೆ ಮತ್ತಷ್ಟು ಆನೆಬಲ ನೀಡಿದ್ದು, ಮುಂದೆಯೂ ಹಲವು ಸಮಾಜಮುಖಿ ಯೋಜನೆಗಳಿಗೆ ಪ್ರೇರಣೆಯಾಗಲಿದೆ.

