ವೇಣೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ‘ಸೇವಾ ದಿನ’ ಆಚರಣೆಯ ಅಂಗವಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೊಸಂಗಡಿ ಹಾಗೂ ಗರ್ಡಾಡಿ ವಲಯದ ವತಿಯಿಂದ ಗುಂಡೂರಿ ಶ್ರೀ ಗುರುಚೈತನ್ಯ ವಯೋವೃದ್ಧರ ಸೇವಾಶ್ರಮಕ್ಕೆ ಹಣ್ಣುಹಂಪಲು ಹಾಗೂ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.





ಕಾರ್ಯಕ್ರಮದಲ್ಲಿ ಮಾತನಾಡಿದ ಯೋಜನೆಯ ಗುರುವಾಯನಕೆರೆ ತಾಲೂಕು ಯೋಜನಾಧಿಕಾರಿ ಹರೀಶ್ ಅವರು, “ಪೂಜ್ಯ ಖಾವಂದರ ಆಶಯದಂತೆ ಗ್ರಾಮಾಭಿವೃದ್ಧಿ ಯೋಜನೆಯು ಸದಾ ಬಡವರ ಏಳಿಗೆಗೆ ಶ್ರಮಿಸುತ್ತಿದೆ. ರಾಜ್ಯದ 6 ಕೋಟಿ ಜನಸಂಖ್ಯೆಯಲ್ಲಿ ಸುಮಾರು ಐದು ಕೋಟಿಯಷ್ಟು ಜನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತ್ಯಕ್ಷ ಹಾಗೂ ಪರೋಕ್ಷ ಫಲಾನುಭವಿಗಳಾಗಿದ್ದಾರೆ. ಶ್ರೀ ಕ್ಷೇತ್ರದ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಜನರು ಧಾರ್ಮಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ‘ವಾತ್ಸಲ್ಯ’ ಯೋಜನೆಯಡಿ ಅರ್ಹರಿಗೆ ಈಗಾಗಲೇ ಏಳು ಮನೆಗಳನ್ನು ನಿರ್ಮಿಸಿಕೊಡುವ ಮಹತ್ಕಾರ್ಯ ನಡೆಯುತ್ತಿದ್ದು, ನಿರ್ಗತಿಕ ವಯೋವೃದ್ಧರನ್ನು ಸಾಕಿ ಸಲಹುತ್ತಿರುವ ಸೇವಾಶ್ರಮದ ಕಾರ್ಯ ಶ್ಲಾಘನೀಯ” ಎಂದರು.


ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಗಿರೀಶ್ ಕೆ.ಎಸ್. ಮಾತನಾಡಿ, “ಡಾ. ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಳ್ಳುವ ಇಂತಹ ಸಮಾಜಮುಖಿ ಕಾರ್ಯಕ್ರಮಗಳಿಂದ ಅವರ ಆಶಯವನ್ನು ಈಡೇರಿಸಿದಂತಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಹಿರಿಯರಾದ ಉಗ್ಗಪ್ಪ ಮೂಲ್ಯ, ಹೊಸಂಗಡಿ ವಲಯ ಮೇಲ್ವಿಚಾರಕಿ ವಿನಯಲತಾ, ಹೊಕ್ಕಾಡಿಗೋಳಿ ಒಕ್ಕೂಟದ ಅಧ್ಯಕ್ಷ ಹರೀಶ್ ಆಚಾರ್ಯ, ಸೇವಾಪ್ರತಿನಿಧಿ ದಿನೇಶ್, ಹೊಸಂಗಡಿ ‘ಎ’ ಒಕ್ಕೂಟದ ಸೇವಾಪ್ರತಿನಿಧಿ ಸೌಮ್ಯ, ಗರ್ಡಾಡಿ ವಲಯ ಮೇಲ್ವಿಚಾರಕಿ ಯಶೋದಾ, ಸೇವಾಪ್ರತಿನಿಧಿಗಳಾದ ಹೇಮಲತಾ, ವನಿತಾ, ರೇಷ್ಮಾ, ವಿದ್ಯಾವತಿ ಹಾಗೂ ಗುಂಡೂರಿ-ಹೊಕ್ಕಾಡಿಗೋಳಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಉಪಸ್ಥಿತರಿದ್ದರು.
ಶ್ರೀ ಗುರುಚೈತನ್ಯ ಸೇವಾಶ್ರಮದ ವ್ಯವಸ್ಥಾಪಕ ಹೊನ್ನಯ್ಯ ಕಾಟಿಪಳ್ಳ ಸ್ವಾಗತಿಸಿ, ಸೇವಾಪ್ರತಿನಿಧಿ ಹರೀಶ್ ಪೂಜಾರಿ ಬಾಡಾರು ವಂದಿಸಿದರು.
