ಹಿಂದಿ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಕುಂಕುಮ್ ಭಾಗ್ಯ’ ಖ್ಯಾತಿಯ ಯುವ ನಟಿ ಸಂಚಿತಾ ಉಗಾಳೆ ಮುಂಬೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಕೇವಲ 30 ವರ್ಷ ವಯಸ್ಸಾಗಿತ್ತು. ಭಾನುವಾರ (ಜೂನ್ 14) ಸಂಜೆ ಮುಂಬೈ ಸಮೀಪದ ನಲಸೋಪಾರಾದಲ್ಲಿ ಅವರು ತಮ್ಮ ಜೀವ ಕೊನೆ ಮಾಡಿಕೊಂಡಿದ್ದು, ಬೆಡ್ರೂಮ್ನಲ್ಲಿ ಅವರ ಶವ ಸಿಕ್ಕಿದೆ. ಸೋಮವಾರ ಈ ವಿಷಯ ಅಧಿಕೃತವಾಗಿ ಬೆಳಕಿಗೆ ಬಂದಿದೆ. ಈ ಸುದ್ದಿ ಕಿರುತೆರೆ ಲೋಕಕ್ಕೆ ಭಾರಿ ಆಘಾತವನ್ನು ನೀಡಿದೆ.
ಪೊಲೀಸ್ ಮೂಲಗಳ ಪ್ರಕಾರ, ಘಟನೆ ನಡೆದ ಸಮಯದಲ್ಲಿ ಸಂಚಿತಾ ಮನೆಯಲ್ಲಿ ಒಬ್ಬರೇ ಇದ್ದರು ಎನ್ನಲಾಗಿದೆ. ಇದರಿಂದ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಸುಲಭವಾಯಿತು. ಕುಟುಂಬಸ್ಥರು ಮನೆಗೆ ಬಂದಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಸದ್ಯಕ್ಕೆ ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಸಂಚಿತಾ ಆತ್ಮಹತ್ಯೆ ಮಾಡಿಕೊಳ್ಳುವ ಕೇಲವೇ ಗಂಟೆಗಳ ಮುನ್ನವಷ್ಟೇ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಅಲ್ಲಿ ರೀಲ್ಸ್ ಒಂದನ್ನು ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಅತ್ಯಂತ ಖುಷಿಯಾಗಿ ನಗುತ್ತಾ ಕಾಣಿಸಿಕೊಂಡಿದ್ದ ನಟಿ, ಇದ್ದಕ್ಕಿದ್ದಂತೆ ಇಂತಹ ನಿರ್ಧಾರ ಕೈಗೊಂಡಿರುವುದನ್ನು ಕಂಡು ಅಭಿಮಾನಿಗಳು ಮತ್ತು ಆಕೆಯ ಸಹ-ಕಲಾವಿದರು ತೀವ್ರ ಆಶ್ಚರ್ಯ ಹಾಗೂ ಕಣ್ಣೀರು ಹಾಕುತ್ತಿದ್ದಾರೆ.



