ಮೈಸೂರು: ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 1ರಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಡೀ ನಗರದಲ್ಲಿ ಬಿಗಿ ಭದ್ರತೆ ಹಾಗೂ ಹೈ ಅಲರ್ಟ್ ಘೋಷಿಸಲಾಗಿದೆ.

ಪ್ರಧಾನಿಗಳ ಭೇಟಿಯ ಭದ್ರತೆಯ ದೃಷ್ಟಿಯಿಂದ ಮೈಸೂರು ನಗರ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಹಾಗೂ ಅಭೇದ್ಯ ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿದೆ. ಇದರ ಪ್ರಮುಖ ಭಾಗವಾಗಿ ಆಗಸ್ಟ್ 1ರಂದು ಮೈಸೂರು ನಗರ ವ್ಯಾಪ್ತಿಯ ಪ್ರಮುಖ ರಸ್ತೆಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ಮಾದರಿಯ ಡ್ರೋನ್ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಮೈಸೂರು ನಗರ ಪೊಲೀಸ್ ಕಮಿಷನರೇಟ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಬಿಗಿ ಬಂದೋಬಸ್ತ್
ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 1ರಂದು ಮೈಸೂರಿಗೆ ಆಗಮಿಸಿ ಶ್ರೀ ರಾಮಕೃಷ್ಣ ಆಶ್ರಮದ ವಿವೇಕ ಸ್ಮಾರಕವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ನಗರದ ಮೂಲೆ ಮೂಲೆಯಲ್ಲೂ ಖಾಕಿ ಪಡೆ ಬಿಗಿ ಬಂದೋಬಸ್ತ್ ಕೈಗೊಂಡಿದೆ. ವಿವಿಐಪಿ ಭದ್ರತೆಯ ಹಿತದೃಷ್ಟಿಯಿಂದ ಹಾಗೂ ಅಹಿತಕರ ಘಟನೆಗಳನ್ನು ತಡೆಯುವ ಮುನ್ನೆಚ್ಚರಿಕೆಯಾಗಿ ಆಗಸ್ಟ್ 1ರಂದು ಇಡೀ ಮೈಸೂರು ನಗರದ ಪ್ರಮುಖ ಮಾರ್ಗಗಳು ಹಾಗೂ ಜಾಗಗಳಲ್ಲಿ ಖಾಸಗಿ ಅಥವಾ ವೃತ್ತಿಪರ ಡ್ರೋನ್ ಹಾರಾಟವನ್ನು ಸಂಪೂರ್ಣವಾಗಿ ‘ನೋ ಫ್ಲೈ ಝೋನ್’ ಎಂದು ಘೋಷಿಸಲಾಗಿದೆ.



