ಜನಸಾಮಾನ್ಯರಿಗೆ ಬೆಲೆ ಏರಿಕೆ ಹೊಡೆತ ಎದುರಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ಗೆ ತಲಾ 3 ರೂಪಾಯಿಯಷ್ಟು ಏರಿಕೆಯಾಗಿದೆ. ಶುಕ್ರವಾರ ಬೆಳಗ್ಗೆಯಿಂದಲೇ ಈ ಪರಿಷ್ಕೃತ ದರ ಅಸ್ತಿತ್ವಕ್ಕೆ ಬಂದಿದೆ. ಇಂಧನ ಮಿತ ವ್ಯಯಕ್ಕೆ ಕರೆ ನೀಡುವ ಮೂಲಕ ಪ್ರಧಾನಿಯವರು ಕೆಲವು ದಿನಗಳ ಹಿಂದಷ್ಟೇ ಬೆಲೆ ಏರಿಕೆ ಸುಳಿವು ನೀಡಿದ್ದರು.
ಬೆಲೆ ಏರಿಕೆ ಸುಳಿವು ನೀಡಿದ್ದ ಕೇಂದ್ರ
ಜಾಗತಿಕ ಇಂಧನ ವ್ಯಾಪಾರ ಮಾರ್ಗಗಳಲ್ಲಿನ ಅಡಚಣೆಗಳ ಹೊರತಾಗಿಯೂ, ತಕ್ಷಣದ ಪೂರೈಕೆ ಅಡಚಣೆಯನ್ನು ತಪ್ಪಿಸಲು ಭಾರತವು ಪ್ರಸ್ತುತ ಸಾಕಷ್ಟು ಇಂಧನ ದಾಸ್ತಾನು ಹೊಂದಿದೆ ಎಂದು ಈ ವಾರದ ಆರಂಭದಲ್ಲಿ ತೈಲ ಇಲಾಖೆ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದರು. ಆದರೂ ಕಚ್ಚಾ ತೈಲ ಬೆಲೆಗಳು ಇನ್ನಷ್ಟು ಹೆಚ್ಚುತ್ತಲೇ ಇದ್ದರೆ ಮತ್ತು ಚಿಲ್ಲರೆ ಇಂಧನ ಬೆಲೆಗಳನ್ನು ಪರಿಷ್ಕರಿಸದಿದ್ದರೆ, ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳು ಒಂದೇ ತ್ರೈಮಾಸಿಕದೊಳಗೆ ಸುಮಾರು 1 ಲಕ್ಷ ಕೋಟಿ ರೂ. ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದರು.
ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಸಹ ಇಂಧನ ಮಿತ ಬಳಕೆ ಹಾಗೂ ಚಿನ್ನ ಖರೀದಿ ನಿಲ್ಲಿಸುವಂತೆ ಜನರಲ್ಲಿ ಮನವಿ ಮಾಡಿದ್ದರು ಎಂಬುದು ಗಮನಾರ್ಹ.





