ಬೆಳ್ತಂಗಡಿ, ಡಿ. 13: ಈ ಬಾರಿಯ ಚಳಿಯ ತೀವ್ರತೆಗೆ ಜನತೆ ಗಡಗಡ ನಡುಗುತ್ತಿದ್ದಾರೆ. ತಾಲೂಕಿನಲ್ಲಿ ಕನಿಷ್ಠ 17 ಡಿಗ್ರಿಗೆ ತಾಪಮಾನ ಕುಸಿದಿರುವುದು ಮನೆಯಲ್ಲಿದ್ದರೂ ತಣ್ಣನೆಯ ಚಳಿ ವಾತಾವರಣವೇ ಕಂಡುಬಂದಿದೆ. ದಿನೇ ದಿನೇ ಚಳಿಯ ಪ್ರಮಾಣ ಹೆಚ್ಚಾಗುತ್ತಿದ್ದು, ಜನರು ಮನೆಗಳಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಬೆಳಗ್ಗೆ 8 ಗಂಟೆ ವರೆಗೂ ಮಂಜು ಕವಿದ ವಾತವರಣವೇ ಇರುತ್ತಿದ್ದು ಸಂಚರಿಸುವವರಿಗೆ ಒಂದೆಡೆ ವಾತಾವರಣ ತಂಪು ನೀಡಿದರೂ, ಇನ್ನೊಂದೆಡೆ ಅಬ್ಬಬ್ಬಾ ಚಳಿ ಎನ್ನುವಂತಾಗಿದೆ. ಆಕಾಶವೇ ನೆಲಕ್ಕೆ ತಾಗಿದ ರೀತಿಯಲ್ಲಿ ಆವರಿಸಿಕೊಳ್ಳುತ್ತಿರುವ ದಟ್ಟವಾದ ಇಬ್ಬನಿ ಶೀತ ವ್ಯಾದಿಗಳು ಆವರಿಸುವ ಆತಂಕ ಸೃಷ್ಟಿಸಿದೆ.






