ಬೆಳ್ತಂಗಡಿ: ಮಹಾತ್ಮಗಾಂಧಿ ಪಡಂಗಡಿ ಗ್ರಾಮ ಪಂಚಾಯತಿಯಲ್ಲಿ ಕಳೆದ ಆರು ವರ್ಷಗಳಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ಮೂಲ್ಕಿ ತಾಲೂಕಿನ ಕಿಲ್ಪಾಡಿ ಗ್ರಾಮ ಪಂಚಾಯತ್ಗೆ ವರ್ಗಾವಣೆಗೊಂಡ ಸಫನಾರವರಿಗೆ ಬಿಳ್ಕೋಡುಗೆ ಸಮಾರಂಭವು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರುಗಿತ್ತು.

ಸಮಾರಂಭದ ಅಧ್ಯಕ್ಷತೆಯನ್ನು ಆಡಳಿತಾಧಿಕಾರಿ ಕ್ಲೆಮೆಂಟ್ ಬ್ರಾಗ್ಸ್ ವಹಿಸಿದ್ದರು. ನೂತನವಾಗಿ ಪಡಂಗಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಪುರುಷೋತ್ತಮ ಇವರು ಮಾತನಾಡಿ ಸಫನಾರವರು ಪಡಂಗಡಿ ಗ್ರಾಮ ಪಂಚಾಯತ್ನ ಅಧಿಕಾರವಧಿಯಲ್ಲಿ ತಾಲೂಕು ಮಟ್ಟದ ನರೇಗಾ ಯೋಜನೆಯ ಪ್ರಭಾರ ಸಹಾಯಕ ನಿರ್ದೇಶಕರಾಗಿ ಅತ್ಯಂತ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಿದ್ದಾರೆ ಎಂದು ತಮ್ಮ ಹಿತನುಡಿಗಳಲ್ಲಿ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಜೈನ್ ಇವರು ಮಾತನಾಡಿ ಪಿಡಿಒ ಸಫನಾರವರು ಪಡಂಗಡಿ ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರೊಂದಿಗೆ ಮತ್ತು ಗ್ರಾಮಸ್ಥರೊಂದಿಗೆ ಉತ್ತಮ ಒಡನಾಟ ಹೊಂದಿದ್ದು ಮಾತ್ರವಲ್ಲದೆ ತನ್ನ ವೈಯಕ್ತಿಕ ವರ್ಚಸ್ಸಿನಿಂದ ಕೆಲವು ಯೋಜನೆಗಳನ್ನು ಗ್ರಾಮ ಪಂಚಾಯತ್ಗೆ ಮಂಜೂರು ಮಾಡಿಸಿಕೊಂಡು ಅವುಗಳನ್ನು ಅನುಷ್ಠಾನಿಸಿಕೊಂಡಿರುವುದು ಗಮನಾರ್ಹವಾಗಿದೆ. ಇಂತಹ ಜನಪರ ಕಾಳಜಿವುಳ್ಳ ಅಧಿಕಾರಿಯನ್ನು ಪಡೆದ ಪಡಂಗಡಿ ಮತ್ತು ಗರ್ಡಾಡಿ ಗ್ರಾಮಗಳ ಗ್ರಾಮಸ್ಥರು ಧನ್ಯರು. ಆದರೆ ಇದೀಗ ವರ್ಗಾವಣೆಗೊಂಡು ತೆರಳುತ್ತಿರುವುದು ಬೇಸರ ತಂದಿದೆ. ಸಫನಾರವರ ಮುಂದಿನ ಸರ್ಕಾರಿ ವೃತ್ತಿ ಜೀವನವು ಹಾಗೂ ಕುಟುಂಬವು ಸುಖ ಶಾಂತಿಯಿಂದ ಕೂಡಿರಲಿ, ಭವಿಷ್ಯದಲ್ಲಿ ಪಡಂಗಡಿ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಅವಕಾಶ ಸಿಗುವಂತಾಗಲಿ, ಎಂದು ಹರಸಿ ಹಾರೈಸಿದರು.
ನಂತರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮೀನಾಕ್ಷಿಯವರು ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾ ನಾನು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಜನರ ಹಿತಸಕ್ತಿಗಳಿಗೆ ಸ್ಪಂದಿಸುತ್ತಾ ನಾನು ತಂದ ಜನರ ಅಹವಾಲುಗಳನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅದಕ್ಕೆ ಬೇಕಾದ ಯೋಜನೆಗಳನ್ನು ರೂಪಿಸುವಲ್ಲಿ ಸಹಕರಿಸಿ ನಾನು ಅಧ್ಯಕ್ಷ ಸ್ಥಾನವನ್ನು ಸಂಪೂರ್ಣಗೊಳಿಸಲು ನಿಮ್ಮಿಂದ ತುಂಬಾ ಸಹಕಾರವಾಗಿದೆ ಎಂದು ನೆನಪಿಸಿದರು, ಸಫನಾರವರು ಯಾವುದೇ ರೀತಿಯಲ್ಲೂ ತಾರತಮ್ಯ ಮಾಡದೇ ಎಲ್ಲರನ್ನೂ ಸಹೋದರ ಸಹೋದರಿಯಂತೆ ಕಂಡು ಜನರ ಸಮಸ್ಯೆಗಳಿಗೆ ಬಹುಬೇಗ ಸ್ಪಂದನೆ ನೀಡುತ್ತಿದ್ದರು ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಆಡಳಿತ ಮಂಡಳಿಯ ನಿಕಟಪೂರ್ವ ಅಧ್ಯಕ್ಷರಾಗಿದ್ದ ವಸಂತ ಪೂಜಾರಿ ಇವರು ಮಾತನಾಡುತ್ತಾ ಅಧಿಕಾರಿಯಾಗಿ ಮಾತ್ರವಲ್ಲ ಜನರ ಜೊತೆ ಮಾತೃ ಹೃದಯದ ಸ್ನೇಹಿತರಂತೆ, ಮಾರ್ಗದರ್ಶಕರಂತೆ ನಮ್ಮೊಂದಿಗೆ ಬೆರೆತು ಕೆಲಸ ಮಾಡಿದ್ದೀರಿ, ಯಾವುದೇ ಕೆಲಸ ಬಂದರೂ ಜನರ ಕೆಲಸ ಎಂಬ ಧ್ಯೇಯದೊಂದಿಗೆ ಮುಂದುವರೆದ ನಿಮ್ಮ ಕೆಲಸದ ಶೈಲಿ ಜನಪ್ರತಿನಿಧಿಗಳಿಗೂ ಜನರಿಗೂ ಸಿಬ್ಬಂದಿ ವರ್ಗಕ್ಕೂ ಒಂದು ಪಾಠವಾಗಿದೆ, ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಗೆ ತಲುಪಿಸುವಲ್ಲಿನ ತಮ್ಮ ಶ್ರದ್ಧೆ ತಮಗೆಲ್ಲರಿಗೂ ಮಾದರಿಯಾಗಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಫನಾರವರ ಗುಣಗಾನ ಮಾಡಿದರು.
ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಅಂತೋನಿ ಫೆರ್ನಾಂಡೀಸ್ ರವರು ಮಾತನಾಡಿ ನಿಮ್ಮ ಅಧಿಕಾರವಧಿಯಲ್ಲಿ ಗ್ರಾಮದ ಸರ್ವ ತೋಮುಖ ಅಭಿವೃದ್ಧಿಗೆ ನೀವು ನೀಡಿದ ಕೊಡುಗೆ ಅಪಾರವಾದದ್ದು, ನೀವು ನಮ್ಮ ಪಂಚಾಯತ್ಗೆ ಬಂದ ದಿನದಿಂದಲೇ ಗ್ರಾಮದ ಸಮಸ್ಯೆಗಳನ್ನು ತಿಳಿದುಕೊಂಡು ಅವುಗಳಿಗೆ ಪರಿಹಾರ ಕಂಡು ಹಿಡಿಯುವಲ್ಲಿ ಬಹುತೇಕ ಯಶಸ್ವಿಯಾಗಿದ್ದೀರಿ, ನಮ್ಮ ಸಹಕಾರಿ ಸಂಘದ ಸಭಾಭವನ ನಿರ್ಮಿಸುವಾಗ ಅದಕ್ಕೆ ಬೇಕಾದ ದಾಖಲೆಗಳನ್ನು ತಮ್ಮ ಪಂಚಾಯತ್ ವತಿಯಿಂದ ನೀಡುವಲ್ಲಿ ನಮಗೆ ತುಂಬಾ ಸಹಕರಿಸಿದ್ದಕ್ಕಾಗಿ ತಮ್ಮ ಸಹಕಾರತ್ವದ ಪರವಾಗಿ ಪಿಡಿಒ ರವರಿಗೆ ಧನ್ಯವಾದವನ್ನು ಸಮರ್ಪಿಸಿ ಈ ಸಂದರ್ಭದಲ್ಲಿ ಅವರನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪರವಾಗಿ ಸನ್ಮಾನಿಸಿದರು.
ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಸುಂದರ ಪೂಜಾರಿಯವರು ತನ್ನ ಅನಿಸಿಕೆಯನ್ನು ಸಲ್ಲಿಸುತ್ತಾ ಸಫನಾ ರವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಗ್ರಾಮಗಳಲ್ಲಿನ ಮೂಲಭೂತ ಸೌಕರ್ಯಗಳಿಗೆ ಒತ್ತು ಕೊಟ್ಟು ಗ್ರಾಮೀಣ ಅಭಿವೃದ್ಧಿಗೆ ಶ್ರಮಿಸಿರುವುದನ್ನು ನೆನಪಿಸಿಕೊಂಡರು. ಗ್ರಾಮ ಪಂಚಾಯತ್ ನ ನಿಕಟಪೂರ್ವ ಆಡಳಿತ ಮಂಡಳಿಯ ಸದಸ್ಯರಾದ ಯೋಗೀಶ್ ಡಿ ಪೆರ್ವೋಡಿ ಮಾತನಾಡಿ ಜನರ ಮತ್ತು ಅಧಿಕಾರಿಯ ಸಂಬಂಧದ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದರು ಸದಸ್ಯರ ಬಗ್ಗೆ ತಾವು ತೋರುತ್ತಿದ್ದ ಕಾಳಜಿ ಮತ್ತು ಗೌರವದ ಬಗ್ಗೆ ಮಾತುಗಳನ್ನಾಡಿ ಸಂತೋಷ ವ್ಯಕ್ತಪಡಿಸಿದರು. ಗ್ರಾಮಸ್ಥರಾದ ದಿನಕರ ಇವರು ಮಾತನಾಡಿ ಗ್ರಾಮಸ್ಥರ ಬಗ್ಗೆ ಇದ್ದ ಕಾಳಜಿಯನ್ನು ಕೊಂಡಾಡಿದರು.
ವಿಶೇಷವಾಗಿ ಕುಡಿಯುವ ನೀರಿನ ವ್ಯವಸ್ಥೆ ಸ್ವಚ್ಛತಾ ಕಾರ್ಯ ಯೋಜನೆಗಳು ರಸ್ತೆ ಅಭಿವೃದ್ಧಿ, ಜನರ ಅಹವಾಲುಗಳನ್ನು ಆಲಿಸುವ ಗುಣ ಹಾಗೂ ಸಿಬ್ಬಂದಿ ವರ್ಗಕ್ಕೆ ಕೆಲಸಕ್ಕೆ ಅನುಕೂಲವಾಗುವಂತೆ ಬೇಕಾದ ವ್ಯವಸ್ಥೆಗಳನ್ನು ಒದಗಿಸಿ ಕೊಡುವಲ್ಲಿ ಮತ್ತು ಜಿಲ್ಲಾ ಮಟ್ಟದ ಗಾಂಧಿ ಗ್ರಾಮ ಪುರಸ್ಕಾರ ಆಯ್ಕೆಯಾಗುವಲ್ಲಿ ಸಿಬ್ಬಂದಿಗಳ ಜೊತೆ ಸೇರಿ ಅದಕ್ಕೆ ಬೇಕಾದ ಪೂರಕ ದಾಖಲೆಗಳನ್ನು ಒದಗಿಸುವಲ್ಲಿ ನಿಮ್ಮ ಶ್ರಮ ಶ್ಲಾಘನೀಯ ಎಂದು ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಕೃಷ್ಣಪ್ಪ ಪೂಜಾರಿ ರವರು ಪಿಡಿಒರವರ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಪಡಂಗಡಿ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯರಾದ ಮೆಲ್ವಿನ್ ಇವರು ಮಾತನಾಡಿ ನೀವು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾಗಿ ಕಳೆದ ಆರು ವರ್ಷಗಳಿಂದ ಅತ್ಯಂತ ಸಮರ್ಪಣಾ ಮನೋಭಾವದಿಂದ ಜನಪರ ಸೇವೆ ಸಲ್ಲಿಸಿರುತ್ತೀರಿ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ, ಹಲವಾರು ಕೆಲಸಕಾರ್ಯಗಳನ್ನು ಒದಗಿಸುವಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ರೀತಿಯಲ್ಲಿ ತಮ್ಮ ಅಧಿಕಾರವಧಿಯಲ್ಲಿ ಕರ್ತವ್ಯ ನಿರ್ವಹಿಸಿದ್ಧೀರಿ ಅದರ ಜೊತೆಗೆ ಯಾರೇ ಬಂದರು ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದ ನಿಮ್ಮ ನಡತೆ ಶ್ಲಾಘನೀಯ ಎಂದು ಹೇಳಿದರು. ಸಾಮಾನ್ಯವಾಗಿ ಸರಕಾರಿ ಅಧಿಕಾರಿಗಳು ತನ್ನ ಕಾನೂನು ಚೌಕಟ್ಟಿನೊಳಗೆ ಮಾತ್ರ ಕಾರ್ಯನಿರ್ವಹಿಸುವುದನ್ನು ನಾವು ಗಮನಿಸಬಹುದಾಗಿದ್ದು ಆದರೆ ಸಫನಾರವರು ಎಲ್ಲಾ ನಾಗರಿಕರ ಬೇಡಿಕೆಗಳಿಗೆ ಮಾನವೀಯತೆಯಿಂದ ಸ್ಪಂದಿಸುತ್ತಾ ಎಲ್ಲರ ಪ್ರೀತಿಪಾತ್ರಕ್ಕೆ ಕಾರಣರಾಗಿದ್ದರು ಎಂದು ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದರು,
ಸಿಬ್ಬಂದಿಗಳ ಪರವಾಗಿ ಮಾತನಾಡಿದ ಶ್ರೀಮತಿ ದಿವ್ಯ ಕಛೇರಿ ಎಂದರೆ ಕೇವಲ ಕೆಲಸದ ಜಾಗ ಮಾತ್ರವಲ್ಲ ಅದು ಒಂದು ಕುಟುಂಬ ಅಂತ ನೀವು ನಮಗೆ ಕಲಿಸಿಕೊಟ್ಟಿದ್ದೀರಿ ಯಾವ ಸಿಬ್ಬಂದಿಗೆ ಏನೇ ಸಮಸ್ಯೆ ಬಂದರೂ ಅದನ್ನು ವಿಚಾರಿಸಿ ಧೈರ್ಯ ತುಂಬಿದವರು ತಾವು ಕೆಲಸ ಪ್ರಾಮಾಣಿಕರವಾಗಿರಬೇಕು ಆದರೆ ಮನುಷ್ಯತ್ವ ಇನ್ನೂ ದೊಡ್ಡದು ಎಂದು ತೋರಿಸಿಕೊಟ್ಟವರು ತಾವು, ನಿಮ್ಮ ಮುಂದಿನ ಜೀವನದಲ್ಲಿ ಯಶಸ್ಸು ಆರೋಗ್ಯ ಶಾಂತಿ ತುಂಬಿ ತುಳುಕಲಿ ನೀವು ಇನ್ನೂ ಉನ್ನತ ಸ್ಥಾನಕ್ಕೆ ಏರುವಂತಾಗಲಿ ನಮ್ಮ ಪ್ರಾರ್ಥನೆ ನಿಮ್ಮ ಜೊತೆ ಯಾವತ್ತೂ ಇರುತ್ತದೆ ಎಂಬ ಭಾವುಕ ನುಡಿಗಳನ್ನಾಡಿದರು.
ಪಡಂಗಡಿ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಮಾತನಾಡಿ ತಮ್ಮ ಗ್ರಂಥಾಲಯಕ್ಕೆ ನೀಡಿದ ಸಹಕಾರದ ಬಗ್ಗೆ ನೆನೆದು ಭಾವುಕರಾದರು. ಅಭಿನಂದನಾ ಗೌರವ ಸ್ವೀಕರಿಸಿ ಮಾತನಾಡಿದ ಸಫನಾರವರು ತಾನು ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಆಡಳಿತ ಮಂಡಳಿಯ ಸದಸ್ಯರು, ಊರಿನ ನಾಗರಿಕರು, ವಿವಿಧ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಹಾಗೂ ಎಲ್ಲಾ ಇಲಾಖಾಧಿಕಾರಿಗಳು, ನೀಡಿದ ಸಹಕಾರವನ್ನು ನೆನಪಿಸುತ್ತಾ ಧನ್ಯವಾದವನ್ನು ಸಲ್ಲಿಸಿದರು. ಗ್ರಾಮ ಕಾರ್ಯದರ್ಶಿಯವರಾದ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ಧನ್ಯವಾದವಿತ್ತರು. ಸಿಬ್ಬಂದಿಗಳು ಸಹಕರಿಸಿದರು.



