ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಕಾಕ್ರೋಚ್ ಜನತಾ ಪಾರ್ಟಿಯ ಸುದೀರ್ಘ ಪ್ರತಿಭಟನೆಯ ಬೆನ್ನಲ್ಲೇ, ಕೇಂದ್ರ ಸರ್ಕಾರವು ಐಎಎಸ್ ಅಧಿಕಾರಿಗಳ ಮಟ್ಟದಲ್ಲಿ ಭಾರಿ ಬದಲಾವಣೆ ಮಾಡಿದೆ.

ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿದ್ದ ವಿನೀತ್ ಜೋಶಿ ಅವರನ್ನು ಆ ಹುದ್ದೆಯಿಂದ ವಜಾಗೊಳಿಸಲಾಗಿದ್ದು, ಅವರ ಸ್ಥಾನಕ್ಕೆ ಹಿರಿಯ ಐಎಎಸ್ ಅಧಿಕಾರಿ ನರೇಶ್ ಪಾಲ್ ಗಂಗ್ವಾರ್ ಅವರನ್ನು ನೂತನ ಉನ್ನತ ಶಿಕ್ಷಣ ಕಾರ್ಯದರ್ಶಿಯಾಗಿ ನೇಮಿಸಿ ತಡರಾತ್ರಿ ಆದೇಶ ಹೊರಡಿಸಲಾಗಿದೆ.ನರೇಶ್ ಪಾಲ್ ಗಂಗ್ವಾರ್ ಅವರು 1994 ರ ರಾಜಸ್ಥಾನ ಕೇಡರ್ನ ಭಾರತೀಯ ಆಡಳಿತ ಸೇವೆ ಅಧಿಕಾರಿಯಾಗಿದ್ದಾರೆ. ಈ ಹಿಂದೆ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಕಾರ್ಯದರ್ಶಿಯಾಗಿ ಹಾಗೂ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.ರಾಜಸ್ಥಾನ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿಯೂ ಅವರು ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 1992 ರ ಮಣಿಪುರ ಕೇಡರ್ ಅಧಿಕಾರಿಯಾದ ವಿನೀತ್ ಜೋಶಿ ಅವರನ್ನು ಉನ್ನತ ಶಿಕ್ಷಣ ಇಲಾಖೆಯಿಂದ ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ.



